ಬಿಡದಿ ಟೌನ್‍ಶಿಪ್ ಯೋಜನೆ ಸರ್ವೇಗೆ ರೈತರ ವಿರೋಧ; ಅಧಿಕಾರಿಗಳ ವಿರುದ್ಧ ಪೊರಕೆ ಪ್ರದರ್ಶನ, ಎರಡು ಕಾರುಗಳ ಗಾಜು ಪುಡಿ

ಬೆಂಗಳೂರು : ಸಾರ್ವಜನಿಕರು ಹಾಗೂ ರೈತರ ವಿರೋಧದ ಮಧ್ಯೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಟೌನ್‍ಶಿಪ್ ಯೋಜನೆಯ ಸರ್ವೇ ಕಾರ್ಯಕ್ಕೆ ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ರೈತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವೇ ಕಾರ್ಯಕ್ಕೆ ಆಕ್ಷೇಪಿಸಿ, ಪೊರಕೆ ಪ್ರದರ್ಶನ ಮಾಡಿದ್ದು, ಎರಡು ಕಾರಿನ ಗಾಜುಗಳನ್ನು ಪುಡಿಗೈದಿದ್ದಾರೆ.
ಸೋಮವಾರ ಬೆಳಗ್ಗೆ ಯೋಜನೆ ವ್ಯಾಪ್ತಿಯಲ್ಲಿನ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ ಗ್ರಾಮಕ್ಕೆ ಸರ್ವೇ ಮಾಡಲು ಅಧಿಕಾರಿಗಳು ತೆರಳಿದ್ದು, ‘ಟೌನ್‍ಶಿಪ್ ಯೋಜನೆಗೆ ಯಾವುದೇ ಕಾರಣಕ್ಕೆ ಅವಕಾಶ ನೀಡುವುದಿಲ್ಲ, ಸರ್ವೇ ಮಾಡಲು ಬಿಡುವುದಿಲ್ಲ’ ಎಂದು ರೈತ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.
ವಿರೋಧದ ನಡುವೆಯೂ ಸರ್ವೇಗೆ ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆ ಸೇವ ಮಾಡಿದ್ದಾರೆ. ಅಲ್ಲದೆ, ಕಲ್ಲು, ಇಟ್ಟಿಗೆಗಳಿಂದ ಅಧಿಕಾರಿಗಳಿದ್ದ ಎರಡು ಕಾರುಗಳ ಗಾಜುಗಳನ್ನು ಪುಡಿ ಮಾಡಿದ್ದಾರೆ. ‘ಯಾವುದೇ ಕಾರಣಕ್ಕೂ ಸರ್ವೇ ಕಾರ್ಯ ನಡೆಸಬಾರದು’ ಎಂದು ಪಟ್ಟುಹಿಡಿಯಲಾಗಿದ್ದು, ಈ ವೇಳೆ ರೈತ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು, ಅಧಿಕಾರಿಗಳನ್ನು ತಮ್ಮ ಭದ್ರತೆಯಲ್ಲಿ ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಕೆಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಂಡಲಹಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪರ-ವಿರೋಧ: ಈ ಮಧ್ಯೆ ಬಿಡದಿ ಟೌನ್‍ಶಿಪ್ ಯೋಜನೆ ಪರ-ವಿರೋಧದ ಎರಡೂ ಗುಂಪುಗಳು ಮುಖಾಮುಖಿಯಾಗಿದ್ದು, ಈ ವೇಳೆ ಹೈ ಡ್ರಾಮ ನಡೆದಿತ್ತು. ಟೌನ್‍ಶಿಪ್ ಯೋಜನೆ ವಿರೋಧಿ ಪ್ರತಿಭಟನೆಗೆ ಆಗಮಿಸಿದ್ದ ರೈತರ ಬಸ್, ಕಾರುಗಳನ್ನು ಯೋಜನೆ ಪರ ಇರುವ ರೈತರು ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ರೈತರನ್ನು ಬಿಡುಗಡೆ ಮಾಡಿ: ‘ಬಿಡದಿ ಟೌನ್‍ಶಿಪ್ ವಿಷಯವಾಗಿ ಸರಕಾರ ರೈತರ ಒಪ್ಪಿಗೆ ಇಲ್ಲದೇ, ಯಾವುದೇ ರೀತಿಯ ಮಾಹಿತಿ ನೀಡದೆ ಸರ್ವೇ ಮಾಡಲು ಹೊರಟಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿರುವ ಸರಕಾರ, ಏನಾದರೂ ಮಾಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟಿರುವುದು ದುರ್ದೈವದ ಸಂಗತಿ. ಈ ಕೂಡಲೇ ಸರಕಾರ ವಶಕ್ಕೆ ಪಡೆದಿರುವ ರೈತರನ್ನು ಬಿಡುಗಡೆ ಮಾಡಬೇಕು ಹಾಗೂ ಬಿಡದಿ ಟೌನ್‍ಶಿಪ್ ಯೋಜನೆಯನ್ನು ಕೈಬಿಡಬೇಕು’
-ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ
‘ಸರಕಾರ ಪೊಲೀಸರ ಬಲಪ್ರಯೋಗ ಹಾಗೂ ದಬ್ಬಾಳಿಕೆ ಮೂಲಕ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಜೆಡಿಎಸ್ ಮೊದಲಿನಿಂದಲೂ ರೈತರ ಹಿತರಕ್ಷಣೆಗೇ ಬದ್ಧವಾಗಿದೆ. ರೈತರ ಒಪ್ಪಿಗೆಯಿಲ್ಲದೆ, ಅವರ ಆಕ್ಷೇಪಣೆಗಳನ್ನು ಪರಿಗಣಿಸದೆ ಬಿಡದಿಯಲ್ಲಿ ರೈತರ ಒಂದಿಂಚು ಭೂಮಿಯನ್ನೂ ಮುಟ್ಟಲು ಬಿಡುವುದಿಲ್ಲ. ಕೂಡಲೇ ಈ ಸರ್ವೆ, ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಮತ್ತು ಬಿಡದಿ ಟೌನ್‍ಶಿಪ್ ಯೋಜನೆಯನ್ನು ಕೈಬಿಡಬೇಕು. ಇಲ್ಲದಿದ್ದರೆ ಜೆಡಿಎಸ್ ಪಕ್ಷವು ರೈತರ ಪರವಾಗಿ ಬೀದಿಗಿಳಿದು ಹೋರಾಟ ನಡೆಸಲಿದೆ’ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.






