ʼಬಿಗ್ಬಾಸ್ʼ ವಿನ್ನರ್ ಗಿಲ್ಲಿ ಅಲ್ಲ, ನಿರ್ಮಲಾ ಸೀತಾರಾಮನ್: ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ

ಪ್ರದೀಪ್ ಈಶ್ವರ್
ಬೆಂಗಳೂರು: ರಾಜ್ಯದ ಜನರಿಗೆ ಒಂದು ವಿಷಯ ತಿಳಿಸಲು ಇಚ್ಛಿಸುತ್ತೇವೆ. ಎಲ್ಲರೂ ತಿಳಿದುಕೊಂಡಿದ್ದಾರೆ ಈ ಸಾಲಿನ ಬಿಗ್ಬಾಸ್ ರಿಯಾಲಿಟಿ ಶೋ ವಿನ್ನರ್ ಗಿಲ್ಲಿ ಅಂತ, ಆದರೆ, ನಾನು ಹೇಳುತ್ತೇನೆ, ವಿನ್ನರ್ ಗಿಲ್ಲಿ ಅಲ್ಲ, ನಿಜವಾದ ವಿನ್ನರ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಡಂ ಎಂದು ಕಾಂಗ್ರೆಸ್ ಸದಸ್ಯ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು.
ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಎ.ಎಸ್.ಪೊನ್ನಣ್ಣ ಸೂಚಿಸಿದ ‘ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವ’ವನ್ನು ಅನುಮೋದಿಸಿ ಅವರು ಮಾತನಾಡಿದರು.
ಬಿಗ್ ಬಾಸ್ ಗೆದ್ದವರಿಗೆ ನೀಡಿದ ಬಹುಮಾನ 50ಲಕ್ಷ ರೂ.ಗಳಲ್ಲಿ ಶೇ.18ರಷ್ಟು ಜಿಎಸ್ಟಿ, ಶೇ.30ರಷ್ಟು ಆದಾಯ ತೆರಿಗೆ ಹಾಗೂ ಶೇ.4ರಷ್ಟು ಸೆಸ್ ಸೇರಿ ಒಟ್ಟು ಶೇ.52ರಷ್ಟು ಪಾಲು ಪಡೆದಿದ್ದು ನಿರ್ಮಲಾ ಸೀತಾರಾಮನ್. ಪಾಪ ಮಂಡ್ಯ ಹುಡುಗ(ಗಿಲ್ಲಿ)ನಿಗೆ ಹೋಗೋದು ಕೇವಲ ಶೇ.48ರಷ್ಟು ಮಾತ್ರ. ಕೇಂದ್ರ ಸರಕಾರದ ತೆರಿಗೆ ವಿಧಾನದಿಂದ ಜನಸಾಮಾನ್ಯರಿಗೆ ಯಾವ ರೀತಿ ತೊಂದರೆ ಆಗುತ್ತಿದೆ ನೋಡಿ ಎಂದು ಪ್ರದೀಪ್ ಈಶ್ವರ್ ಗಮನ ಸೆಳೆದರು.
ಮನರೇಗಾ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲು ಕ್ರಮವಾಗಿ ಶೇ.60, 40ರಷ್ಟು ಇತ್ತು. ಹೊಸ ಕಾಯ್ದೆಯು ಈ ಪ್ರಮಾಣವನ್ನು ಶೇ.90: ಶೇ.10ಕ್ಕೆ ಇಳಿಸಿದ್ದಾರೆ. ಆದರೆ, ಈಶಾನ್ಯ ರಾಜ್ಯಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಇದರ ಬಗ್ಗೆ ಭಾಷಣದಲ್ಲಿ ಹೇಳಿ ರಾಜ್ಯಪಾಲರೆ ಎಂದು ನಾವು ಕೇಳಿಕೊಂಡೆವು. ಕೇಂದ್ರ ಸರಕಾರ ಐಟಿ, ಸೆಸ್, ಸರ್ಚಾರ್ಜ್ಗಳನ್ನು ಹೇರಿ ಯಾವ ರೀತಿ ರಾಜ್ಯಗಳನ್ನು ಲೂಟಿ ಮಾಡುತ್ತಿದೆ ಎಂದು ನಾವು ಗಮನ ಸೆಳೆದಿದ್ದೇವೆ ಎಂದು ಅವರು ತಿಳಿಸಿದರು.
ಮನರೇಗಾ ಹೆಸರು ಯಾಕೆ ಬದಲಾಯಿಸಿ, ಹೊಸ ಕಾಯ್ದೆಗೆ ‘ರಾಮ್ ಜಿ’ ಎಂದು ಯಾಕೆ ಇಟ್ಟಿದ್ದಾರೆ ಎಂದರೆ ಅಯೋಧ್ಯೆಯಲ್ಲಿ ಇವರು ರಾಮ ಮಂದಿರ ಕಟ್ಟಿದ್ದರು ಅಂತ. ಆದರೂ, ಅಯೋಧ್ಯೆ ಶ್ರೀರಾಮಚಂದ್ರ ಇಂಡಿಯಾ ಒಕ್ಕೂಟಕ್ಕೆ ಒಲಿದರು. ಮತ್ತೊಮ್ಮೆ ಅವರನ್ನು ಓಲೈಸಲು ಈಗ ಪ್ರಯತ್ನಿಸಿದ್ದಾರೆ ಎಂದು ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು.
ರಾಮಮಂದಿರ ಕಟ್ಟೋದಷ್ಟೇ ದೇಶಪ್ರೇಮ ಅಲ್ಲ, ಬಡವರ ಹೊಟ್ಟ ತುಂಬಿಸಿ, ಅವರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಡುವುದು ಅಷ್ಟೇ ಮುಖ್ಯ. ಆ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪಾಲಿನ ಶ್ರೀರಾಮಚಂದ್ರ ಎಂದು ಅವರು ಹೇಳಿದರು.
ಗೃಹ ಲಕ್ಷ್ಮಿ ಯೋಜನೆಯನ್ನು ಅಂತರ್ರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳು ಅಧ್ಯಯನ ವಿಷಯಗಳನ್ನು ಪರಿಗಣಿಸಿ, ಹೊಗಳುತ್ತಿದ್ದಾರೆ. ನಮ್ಮ ಕಾರ್ಯಕ್ರಮಗಳಿಗೆ ಹೆಸರು ಬದಲಾಯಿಸಿ, ಅದರ ಶ್ರೇಯಸ್ಸು ಪಡೆಯುವುದೇ ಕೇಂದ್ರದ ಕೆಲಸ ಆಗಿದೆ ಪ್ರದೀಪ್ ಈಶ್ವರ್ ಟೀಕಿಸಿದರು.
ನನಗೆ ಒಂದು ಕನಸು ಬಿತ್ತು. ಅದರಲ್ಲಿ ಶಿಕ್ಷಕರು ನನಗೆ ಪ್ರಶ್ನೆ ಪತ್ರಿಕೆ ನೀಡಿ ರಾಷ್ಟ್ರಪಿತ ಯಾರು ಎಂದು ಪ್ರಶ್ನಿಸಿದರು. ಅದಕ್ಕೆ ನಾನು ಮಹಾತ್ಮಗಾಂಧಿ ಎಂದು ಉತ್ತರಿಸಿದೆ. ಅದೇ ಪ್ರಶ್ನೆಯನ್ನು ಅಶೋಕ್ ಅಣ್ಣ ಅವರಿಗೆ ಕೇಳಿದಾಗ ನಿನ್ನೆ ಆಗಿದ್ದರೆ ಜೆ.ಪಿ.ನಡ್ಡಾ ಎನ್ನುತ್ತಿದ್ದೆ. ಇವತ್ತು ನಿತಿನ್ ನಬಿನ್, ನಾಳೆ ಗೊತ್ತಿಲ್ಲ ಎಂದರು ಎಂದು ಪ್ರದೀಪ್ ಈಶ್ವರ್ ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.







