ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಮಾಡಿ ವಂಚನೆ ಪ್ರಕರಣ: ಬಿಹಾರ ಮೂಲದ ಆರೋಪಿಯ ಬಂಧನ

ಬಂಧಿತ ಆರೋಪಿ
ಬೆಂಗಳೂರು: ಚಲನಚಿತ್ರ ನಟ, ನಿರ್ದೇಶಕ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಫೋನ್ ಹ್ಯಾಕ್ ಮಾಡಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಇಲ್ಲಿನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ವಿಕಾಸ್ ಕುಮಾರ್(25) ಎಂಬಾತನನ್ನು ಹೊಸದಿಲ್ಲಿಯ ಸೋನಿಯಾ ನಗರದಲ್ಲಿ ಬಂಧಿಸಿ ಕರೆತರಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 15ರಂದು ಬೆಳಗ್ಗೆ ಪ್ರಿಯಾಂಕಾ ಅವರಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಆರ್ಡರ್ ಡೆಲಿವರಿ ಮಾಡಲು ವಿಳಾಸ ಸಿಗುತ್ತಿಲ್ಲ. ಈ ನಂಬರ್ ಡಯಲ್ ಮಾಡಿ ಖಚಿತಪಡಿಸಿದರೆ ಡೆಲಿವರಿ ಮಾಡುತ್ತೇವೆ’ ಎಂದು ಹ್ಯಾಶ್ಟ್ಯಾಗ್ ಸಹಿತ ಒಂದು ನಂಬರ್ ಹೇಳಿದ್ದ. ಆ ನಂಬರ್ ಡಯಲ್ ಮಾಡುತ್ತಿದ್ದಂತೆಯೇ ಪ್ರಿಯಾಂಕಾ ಅವರ ಫೋನ್ ಹ್ಯಾಕ್ ಆಗಿತ್ತು.
ಫೋನ್ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರಬಹುದು ಎಂದು ಭಾವಿಸಿದ್ದ ಪ್ರಿಯಾಂಕಾ ಅವರು ಪತಿ ಉಪೇಂದ್ರ ಹಾಗೂ ಕುಟುಂಬದ ಪರಿಚಿತರಾದ ಮಹಾದೇವ್ ಎಂಬುವರ ಫೋನ್ಗಳಿಂದ ಅದೇ ನಂಬರ್ ಡಯಲ್ ಮಾಡಿದ್ದರು. ಕೂಡಲೇ ಆ ಫೋನ್ಗಳೂ ಸಹ ಹ್ಯಾಕ್ ಆಗಿದ್ದವು.
ಬಳಿಕ ವಾಟ್ಸ್ಆ್ಯಪ್ ಖಾತೆಗಳನ್ನು ನಿಯಂತ್ರಣಕ್ಕೆ ಪಡೆದುಕೊಂಡಿದ್ದ ಆರೋಪಿ, ‘ತುರ್ತಾಗಿ ಹಣದ ಅಗತ್ಯವಿದೆ’ ಎಂದು ಹಲವರಿಗೆ ಸಂದೇಶ ಕಳುಹಿಸಿದ್ದ. ಆ ವೇಳೆ ಪ್ರಿಯಾಂಕಾ ಅವರೇ ಸಂದೇಶ ಕಳುಹಿಸಿರಬಹುದು ಎಂದು ಕೆಲವರು ಹಣ ಹಾಕಿದ್ದಾರೆ. ಸ್ವತಃ ಉಪೇಂದ್ರ ಅವರ ಪುತ್ರ ಸಹ 50 ಸಾವಿರ ರೂಪಾಯಿ ಹಣ ವರ್ಗಾಯಿಸಿದ್ದರು. ಕೂಡಲೇ ಉಪೇಂದ್ರ ದಂಪತಿ ಖುದ್ದು ಸದಾಶಿವನಗರ ಠಾಣೆ ಹಾಗೂ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.
ನಾಲ್ಕು ವಿವಿಧ ಖಾತೆಗಳಿಗೆ ಸುಮಾರು 1.65 ಲಕ್ಷ ರೂಪಾಯಿ ವರ್ಗಾವಣೆಯಾಗಿತ್ತು. ಬಿಹಾರದಲ್ಲಿ 20ರಿಂದ 25 ವಯಸ್ಸಿನ ಯುವಕರೇ ಸೇರಿ ಈ ದಂಧೆಯಲ್ಲಿ ನಿರತರಾಗಿದ್ದು, ಅಲ್ಲಿ 100ಕ್ಕೂ ಹೆಚ್ಚು ಮಂದಿ ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆರೋಪಿ ವಿಕಾಸ್ ಕುಮಾರ್ ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಸದಾಶಿವನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ʼಬುದ್ಧಿವಂತರೆಂದು ಎನಿಸಿಕೊಳ್ಳುವವರೇ ದಡ್ಡರಾಗಿರುತ್ತಾರೆʼ:
ಈ ಪ್ರಕರಣದ ಕುರಿತಂತೆ ಬುಧವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ದೂರುದಾರರಾದ ನಟ ಉಪೇಂದ್ರ, ‘ಬುದ್ಧಿವಂತರೆಂದು ಎನಿಸಿಕೊಳ್ಳುವವರೇ ದಡ್ಡರಾಗಿರುತ್ತಾರೆ, ದಡ್ಡರಂತೆ ಇರುವವರೇ ಬುದ್ಧಿವಂತರಾಗಿರುತ್ತಾರೆ. ಆರ್ಡರ್ ಡೆಲಿವರಿ ಮಾಡುವವರ ಸೋಗಿನಲ್ಲಿ ಕರೆ ಮಾಡಿ ವಂಚಿಸಿದ್ದರು. ವಂಚನೆಯಾಗಿರುವುದು ನಮಗೆ ತಿಳಿಯುವಷ್ಟರಲ್ಲೇ ನನ್ನ ಮಗ, ಪ್ರಿಯಾಂಕಾ ಅವರ ಸ್ನೇಹಿತರು ಒಟ್ಟು 1.65 ಲಕ್ಷ ರೂ.ಹಣ ವರ್ಗಾಯಿಸಿಬಿಟ್ಟಿದ್ದರು. ತಕ್ಷಣ ವಿಡಿಯೋ ಮೂಲಕ ಎಲ್ಲರನ್ನೂ ಎಚ್ಚರಿಸಿದೆವು ಎಂದರು.
ನಮ್ಮ ಪೊಲೀಸರು ತುಂಬಾ ಉತ್ತಮ ಕೆಲಸಗಳನ್ನು ಮಾಡುತ್ತಿರುತ್ತಾರೆ. ಈ ರೀತಿಯ ವಂಚನೆಗಳನ್ನು ತಡೆಗಟ್ಟಲು ಪೊಲೀಸರು ಸಾಕಷ್ಟು ತಾಂತ್ರಿಕವಾಗಿ ಮುಂದಿದ್ದಾರೆ. ತೊಂದರೆಯಾದಾಗ ಪೊಲೀಸ್ ಸಹಾಯವಾಣಿ (112)ಗೆ ಕರೆ ಮಾಡಿದರೆ 10 ನಿಮಿಷದೊಳಗೆ ಅವರನ್ನು ತಲುಪುತ್ತಾರೆ. ಇಂತಹ ವಿಚಾರಗಳು ಜನರಿಗೆ ತಿಳಿಯಬೇಕು, ಆಗಲೇ ಅವರಿಗೂ ಧೈರ್ಯ ಬರುತ್ತದೆ ಎಂದು ಉಪೇಂದ್ರ ತಿಳಿಸಿದರು.
‘ಈ ಪ್ರಕರಣದಲ್ಲಿ ದೂರುದಾರರು ತ್ವರಿತವಾಗಿ ದೂರು ನೀಡಿದ್ದರಿಂದ ಆರೋಪಿಯನ್ನು ಬೇಗನೆ ಪತ್ತೆಹಚ್ಚಲು ಸಹಕಾರಿಯಾಯಿತು. ಸಾರ್ವಜನಿಕರು ಈ ರೀತಿಯ ವಂಚನೆಗಳಿಗೊಳಗಾಗಬಾರದು. ಒಂದು ವೇಳೆ ಆದರೆ ಕೂಡಲೇ ಪೆÇಲೀಸರನ್ನು ಸಂಪರ್ಕಿಸಿದರೆ ಆರೋಪಿಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ. ಈ ಪ್ರಕರಣದ ಮೂಲಕ ಆರೋಪಿಯ ಇತರೆ ಕೆಲ ಪ್ರಕರಣಗಳು ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆಸಲಾಗಿದೆ’
-ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತ.







