ಅಕ್ರಮ ಗಣಿಗಾರಿಕೆ: ಜಪ್ತಿ ವಸೂಲಿ ಆಯುಕ್ತರನ್ನು ನೇಮಿಸುವ ವಿಧೇಯಕಕ್ಕೆ ಅನುಮೋದನೆ

ಬೆಂಗಳೂರು: ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದು ಮತ್ತು ಜಪ್ತಿಗಾಗಿ ವಸೂಲಿ ಆಯುಕ್ತರನ್ನು ನೇಮಿಸುವ ಸಂಬಂಧಪಟ್ಟ ವಿಧೇಯಕ ಅನುಮೋದನೆಗೊಂಡಿತು.
ಗುರುವಾರ ವಿಧಾನಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿಧೇಯಕವನ್ನು ಮಂಡಿಸಿದರು.
ಬಳಿಕ ವಿವರಣೆ ನೀಡಿದ ಸಚಿವರು, ಕಾನೂನು ಬಾಹಿರ ಸಂಪಾದಿಸಿದ ಆಸ್ತಿಯನ್ನು ಜಪ್ತಿ ಮಾಡುವ ನಿಟ್ಟಿನಲ್ಲಿ ಈ ವಿಧೇಯಕ ತರಲಾಗಿದೆ. ಆಸ್ತಿಗಳನ್ನು ವಸೂಲಿ ಮಾಡಲು ಆಯುಕ್ತರ ಅವಶ್ಯಕವೂ ಇದೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ಸದಸ್ಯ ಸಿ.ಸಿ.ಪಾಟೀಲ್, ಬಿಜೆಪಿ ಉಚ್ಚಾಟಿತ ಸದಸ್ಯ ಎಸ್.ಟಿ.ಸೋಮಶೇಖರ್ ಸೇರಿ ಇನ್ನಿತರೆ ಸದಸ್ಯರು ವಿಧೇಯಕ ಕುರಿತು ಮಾತನಾಡಿದರು. ಬಳಿಕ ಸ್ಪೀಕರ್ ಯು.ಟಿ.ಖಾದರ್ ಅವರು ಧ್ವನಿಮತದ ಮೂಲಕ ಈ ವಿಧೇಯಕ ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿದರು.
ಮತ್ತೊಂದು ವಿಧೇಯಕ: ಇಂದನ ಸಚಿವ ಕೆ.ಜೆ.ಜಾರ್ಜ್ ಅವರು ಮಂಡಿಸಿದ 2025ನೆ ಸಾಲಿನ ಕರ್ನಾಟಕ ಲಿಫ್ಟ್, ಎಸ್ಕಲೇಟರ್ ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್‍ಗಳ(ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕಾರವಾಯಿತು.







