ಬ್ಯಾರಿಗಳು ಸಂಘಟಿತರಾದರೆ ಸಾಮೂಹಿಕ ಪ್ರಗತಿ ಸಾಧ್ಯ: ಉಮರ್ ಟೀಕೆ

ಬೆಂಗಳೂರು: ಬ್ಯಾರಿಗಳು ಸಂಘಟಿತರಾಗುವುದರಿಂದ ಸಾಮೂಹಿಕ ಪ್ರಗತಿ ಕಾಣಲು ಸಾಧ್ಯವಿದೆ. ಬ್ಯಾರಿ ಸಮುದಾಯದವರು ಈಗಾಗಲೇ ವ್ಯಾಪಾರದಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಶಿಕ್ಷಣದಲ್ಲೂ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಕೆನಡಾ, ಲಂಡನ್, ನ್ಯೂಝಿಲೆಂಡ್, ಅಮೆರಿಕಾ ಸಹಿತ ನಾನಾ ದೇಶಗಳಲ್ಲಿ ಬ್ಯಾರಿಗಳು ವ್ಯಾಪಾರ ನಡೆಸುತ್ತಿದ್ದಾರೆ ಎಂದು ಟೀಕೆಸ್ ಗ್ರೂಪ್‌ನ ಅಧ್ಯಕ್ಷ ಉಮರ್ ಟೀಕೆ ಅವರು ಹೇಳಿದರು.
ಬುಧವಾರ ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರಿನಲ್ಲಿ ಆಯೋಜಿಸಿದ ‘ಬ್ಯಾರಿ ಕೂಟ’ದಲ್ಲಿ ನಡೆದ 'ಬಿಝ್ಟೆಕ್ ಮೀಟ್'ನಲ್ಲಿ ಅವರು ಮಾತನಾಡಿದರು.
ಬ್ಯಾರಿ ಸಮುದಾಯದಲ್ಲಿ ಹದಿನೇಳು ಲಕ್ಷದಿಂದ 22 ಲಕ್ಷದೊಳಗೆ ಜನರಿದ್ದಾರೆ. ಸಣ್ಣ ಮಟ್ಟದ ವ್ಯಾಪಾರ ಮಾಡುವವರಿಗೆ ಲಾಭದಾಯಕ ಬಿಸಿನೆಸ್ ಬಗ್ಗೆ ಮಾಹಿತಿ ನೀಡಬೇಕಾಗಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರು ಸಹಿತ ವಿವಿದ ಕಡೆಗಳಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಮುನ್ನಡೆಯುವಂತೆ ಶ್ರಮಿಸಬೇಕಾಗಿದೆ. ಸಮಾಜದ ಟೀಕೆಗಳ ಕಡೆ ಗಮನ ಕೊಡದೆ ಗುರಿಯತ್ತ ಮುನ್ನಡೆಯಬೇಕೆಂದು ಎಂದು ಅವರು ಹೇಳಿದರು.
ಶೈಕ್ಷಣಿಕ ಪ್ರಗತಿ, ವ್ಯಾಪಾರ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಬ್ಯಾರಿ ಸಮುದಾಯ ತೊಡಗಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ಆಡಳಿತದ ಅಧೀನದಲ್ಲಿರುವ 160 ಕ್ಕೂ ಅಧಿಕ ಶಾಲೆಗಳಲ್ಲಿ ಕಡಿಮೆ ಶುಲ್ಕ, ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಚರ್ಚೆಯಲ್ಲಿ ಭಾಗವಹಿಸಿದ ಹನ ಸಂಸ್ಥೆಯ ನಿರ್ದೇಶಕ ಅನ್ವರ್ ಸಾದಾತ್ ಮಾತನಾಡಿ, ವ್ಯಾಪಾರಸ್ಥರಿಗೆ ಎದುರಾಗುವ ಸವಾಲುಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ʼಬಿಸಿನೆಸ್ ಪಾಯಿಂಟ್ʼ ಇರಬೇಕು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಎ. ಎಸ್. ಗ್ರೂಪ್ಸ್ ಆಫ್ ಕಂಪನಿಸ್‌ನ ಸವಾದ್ ಕುಂಞಿ ಉಪಸ್ಥಿತರಿದ್ದರು.
ಸೈಫ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.