ಕರ್ನಾಟಕದಲ್ಲಿ ಡಿಲೀಟ್ ಆಗುವ ಪ್ರತಿ ಮತಕ್ಕೂ ಬಿಜೆಪಿಯೇ ನೇರ ಕಾರಣ: ರಮೇಶ್ ಬಾಬು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಡಿಲೀಟ್ ಆಗುವ ಪ್ರತಿ ಮತಕ್ಕೂ ಬಿಜೆಪಿಯೇ ನೇರ ಕಾರಣ. ದೇಶದಲ್ಲಿ ಎಸ್‍ಐಆರ್ ಮೂಲಕ ಇಲ್ಲಿ ಕೇವಲ ಮತಪಟ್ಟಿ ಪರಿಷ್ಕರಣೆ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಮತದಾರರನ್ನು ಮತಪಟ್ಟಿಯಿಂದ ಡಿಲೀಟ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಆರೋಪಿಸಿದ್ದಾರೆ.
ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಎಸ್‍ಐಆರ್ ಸಂಬಂಧಿಸಿದಂತೆ ನಾವು ಈಗಾಗಲೇ ಚುನಾವಣಾ ಆಯೋಗಕ್ಕೆ ಅರ್ಹ ಮತದಾರರನ್ನು ಕೈಬಿಡಬಾರದು ಎಂದು ಸಾಕಷ್ಟು ಮನವಿ ಮಾಡಿದ್ದೇವೆ. ಆದರೂ, 5.40 ಕೋಟಿ ಮತದಾರರ ಪೈಕಿ ಶೇ.20ರಷ್ಟು ಮತದಾರರನ್ನು ಡಿಲೀಟ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು.
ಗೈರು, ಮೃತಪಟ್ಟವರು, ವಿವಿಧ ಕಡೆ ಮತದಾನದ ಹಕ್ಕು ಹೊಂದಿರುವವರು, ವಿಳಾಸ ಬದಲಾವಣೆ ಹೆಸರಿನಲ್ಲಿ ಮತ ಡಿಲೀಟ್ ಮಾಡಲಾಗುತ್ತಿದೆ. ಬೆಂಗಳೂರಿನ ಕೆ.ಆರ್.ಪುರದಲ್ಲಿ 1 ಲಕ್ಷ ಗೈರಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಮತದಾರರ ಮನೆಗೆ ಹೋಗದೆ, ಗಣತಿ ನಮೂನೆ ನೀಡದೇ ಈ ರೀತಿ ಕಾರಣ ನೀಡಿ ಮತ ಡಿಲೀಟ್ ಮಾಡಲಾಗುತ್ತಿದೆ. ಈ ರೀತಿ 1 ಕೋಟಿಗೂ ಹೆಚ್ಚು ಮತದಾರರ ಹೆಸರು ಕೈಬಿಡಲಾಗಿದೆ ಎಂದು ರಮೇಶ್ ಬಾಬು ಮಾಹಿತಿ ನೀಡಿದರು.
ಆಯೋಗ ನೀಡಿರುವ ಅಂಕಿ ಅಂಶಗಳ ಪ್ರಕಾರ 97.7ರಷ್ಟು ಗಣತಿ ನಮೂನೆ ವಿತರಣೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ 3-4ರಷ್ಟು ಗೈರಾಗಿರುವವರು ಬರಲು ಹೇಗೆ ಸಾಧ್ಯ? ಸ್ಥಳ ಬದಲಾವಣೆ ಆಗಿರುವವರಿಗೆ ಗಣತಿ ನಮೂನೆ ನೀಡಿಲ್ಲ. 2002ರ ಮತಪಟ್ಟಿಯಲ್ಲಿ ಹೊಂದಾಣಿಕೆ ಆಗದವರಿಗೆ ಗಣತಿ ನಮೂನೆ ನೀಡಿಲ್ಲ. ಎಸ್‍ಐಆರ್ ಪ್ರಕ್ರಿಯೆ ಆರಂಭಿಸಿದಾಗ ಬೆಂಗಳೂರು ಹೊರತಾಗಿ 92ರಷ್ಟು ಮತದಾರರ ಮ್ಯಾಪಿಂಗ್ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿತ್ತು. ಕೇಂದ್ರದ ಸರಕಾರದ ಅಣತಿಯಂತೆ ನಮ್ಮ ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆಯಲಾಗುತ್ತಿದೆ ಎಂದು ರಮೇಶ್ ಬಾಬು ಆರೋಪಿಸಿದರು.
ರಾಜ್ಯದಲ್ಲಿರುವ ಅರ್ಹ ಮತದಾರರಿಗೆ ಮತದಾನದ ಹಕ್ಕು ರಕ್ಷಿಸಲು ಕಾಂಗ್ರೆಸ್ ಸರಕಾರ ವಾಸ ದೃಢೀಕರಣ ಪತ್ರ ನೀಡಿದೆ. ಅದನ್ನು ಬಿಜೆಪಿ ಟೀಕೆ ಮಾಡಿತ್ತು. ಅವರ ಉದ್ದೇಶ ಸ್ಪಷ್ಟವಾಗಿದ್ದು, ರಾಜ್ಯದಲ್ಲಿ ಮತದಾರರು ಕಾಂಗ್ರೆಸ್ ಪರವಾಗಿರುವುದರಿಂದ ಹಿಂದಿನ ಚುನಾವಣೆಯಲ್ಲಿ 43ರಷ್ಟು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರುವುದರಿಂದ ನಾವು ಅವರನ್ನು ಮತಪಟ್ಟಿಯಿಂದ ಕೈಬಿಡಬೇಕು ಎಂದು ತೀರ್ಮಾನಿಸಿರಬಹುದು ಎಂದು ರಮೇಶ್ ಬಾಬು ತಿಳಿಸಿದರು.
ನಾವು ಬರೆದ ಹಲವಾರು ಪತ್ರಗಳಿಗೆ ಆಯೋಗ ಉತ್ತರ ನೀಡಿಲ್ಲ. ನಾವು ಉತ್ತರ ಕೇಳಿದರೆ ಕೇಂದ್ರ ಚುನಾವಣಾ ಆಯೋಗ ಸಂಪರ್ಕಿಸಿ ಎಂದು ಹೇಳುತ್ತಾರೆ. ಪ್ರತಿ ವಾರ ಎಲ್ಲ ಪಕ್ಷಗಳ ಸಭೆ ಮಾಡುತ್ತಾರೆ. ಆದರೆ, ನಾವು ಕೊಟ್ಟ ಸಲಹೆ ಪರಿಗಣಿಸುತ್ತಿಲ್ಲ. ರಾಜ್ಯದ ಎಲ್ಲ ಬೂತ್‍ಗಳಲ್ಲಿ ಸಹಾಯ ಕೇಂದ್ರ ಮಾಡುವುದಾಗಿ ಹೇಳಿದ್ದರು. ಆದರೆ, ಇದನ್ನು ಮಾಡಿಲ್ಲ. ಇದು ಚುನಾವಣಾ ಅಧಿಕಾರಿಗಳ ವೈಫಲ್ಯ ಎಂದು ರಮೇಶ್ ಬಾಬು ದೂರಿದರು.
ಅರ್ಹ ಮತದಾರರ ಮತದಾನದ ಹಕ್ಕು ರಕ್ಷಣೆ ಚುನಾವಣಾ ಆಯೋಗದ ಕರ್ತವ್ಯ. ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶ ಮಾಡಿ ಈ ಗಣತಿ ನಮೂನೆ ಸಲ್ಲಿಸುವ ಕಾಲಾವಧಿಯನ್ನು ಒಂದು ತಿಂಗಳ ಕಾಲ ವಿಸ್ತರಣೆ ಮಾಡಬೇಕು. 20ರಷ್ಟು ಮತದಾರರನ್ನು ಮತಪಟ್ಟಿಯಿಂದ ತೆಗೆಯುವುದಕ್ಕೆ ಅಂಕುಶ ಹಾಕಬೇಕು. ಅಗತ್ಯ ಬಿದ್ದರೆ ಇದರ ವಿರುದ್ಧ ಹೈಕೋರ್ಟ್‍ನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ರಮೇಶ್ ಬಾಬು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪದವೀಧರರ ವಿಭಾಗದ ಅಧ್ಯಕ್ಷ ನಟರಾಜ ಗೌಡ, ಮಾಜಿ ಮೇಯರ್ ರಾಮಚಂದ್ರಪ್ಪ ಉಪಸ್ಥಿತರಿದ್ದರು.
ಚುನಾವಣಾ ಆಯುಕ್ತರು ಬಿಜೆಪಿಯ ಕೈಗೊಂಬೆ:
ಬಿಜೆಪಿಯ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಹಿಡಿದು ಎಲ್ಲರೂ ಚುನಾವಣಾ ಆಯೋಗದ ಕ್ರಮವನ್ನು ಸಮರ್ಥನೆ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅರ್ಹ ಮತದಾರರು ಮತದಾನದ ಹಕ್ಕು ಕಳೆದುಕೊಂಡರೆ ಅದಕ್ಕೆ ಬಿಜೆಪಿಯೇ ನೇರ ಹೊಣೆ. ಬಿಜೆಪಿಯ ಕೈಗೊಂಬೆಯಾಗಿ ಚುನಾವಣಾ ಆಯೋಗದ ಆಯುಕ್ತರು ಕೆಲಸ ಮಾಡುತ್ತಿದ್ದಾರೆ ಎಂದು ರಮೇಶ್ ಬಾಬು ಗಂಭೀರ ಆರೋಪ ಮಾಡಿದರು.






