ಬಿಜೆಪಿಯು ಕರ್ನಾಟಕ ಅಭಿವೃದ್ಧಿ ವಿರೋಧಿ ಪಕ್ಷ: ಡಿ.ಕೆ. ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ಕರ್ನಾಟಕ ಅಭಿವೃದ್ಧಿ ವಿರೋಧಿ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸುರಂಗ ರಸ್ತೆ ನಿರ್ಮಾಣಕ್ಕೆ ಎಷ್ಟು ಮಂದಿ ಗುತ್ತಿಗೆದಾರರು ಟೆಂಡರ್ ಅರ್ಜಿ ಹಾಕಿದ್ದಾರೆ ಎಂದು ಒಂದೆರಡು ದಿನಗಳಲ್ಲಿ ತಿಳಿಯುತ್ತದೆ. ನಮ್ಮ ಸುರಂಗ ರಸ್ತೆಯ ಸ್ವರೂಪ, ಗಾತ್ರದ ಬಗ್ಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ, ಮುಂಬೈ, ದಿಲ್ಲಿ, ಪುಣೆಯವರು ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಶೇ.50ರಷ್ಟು ಭಾಗ ಕಲ್ಲಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೆ ನಾವು ಮೆಟ್ರೋ ಯೋಜನೆ ಮಾಡಿದ್ದೇವೆ. ಮೆಟ್ರೋ ಶೇ.50ರಷ್ಟು ಮಾರ್ಗ ಸುರಂಗ ರೂಪದಲ್ಲಿದೆ. ಆಗ ಯಾರೂ ಮಾತನಾಡಲಿಲ್ಲ. ನಾವು ನಮ್ಮ ಕರ್ತವ್ಯ ಮಾಡುತ್ತೇವೆ. ಬೇರೆ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇದು ನನಗಾಗಿ ಮಾಡುತ್ತಿರುವ ಯೋಜನೆಯಲ್ಲ. ಇದು ಮುಂದಿನ ಪೀಳಿಗೆಯ ಭವಿಷ್ಯಕ್ಕೆ, ಬೆಂಗಳೂರಿಗಾಗಿ ಎಂದು ಅವರು ತಿರುಗೇಟು ನೀಡಿದರು.
ಮುಂಬೈ, ಪುಣೆಯಲ್ಲಿ ಸುರಂಗ ರಸ್ತೆ ಮಾಡಿದ್ದಾರೆ. ಅಲ್ಲಿ ಎಲ್ಲವೂ ಸರಿಯಾಗಿದೆ. ಕರ್ನಾಟಕದಲ್ಲಿ ಏನೆ ಮಾಡಲು ಹೋದರೂ ವಿರೋಧ ಮಾಡುತ್ತಿದ್ದಾರೆ. ನಾನು ವಿಧಾನಸೌಧದಲ್ಲಿ ಬೆಂಗಳೂರಿನ ಶಾಸಕರನ್ನು ಸಭೆಗೆ ಕರೆದು ಸುರಂಗ ರಸ್ತೆ ವಿಚಾರದಲ್ಲಿ ಏನೇನು ಮಾಡಲು ಹೋರಟಿದ್ದೇನೆ ಎಂದು ಹೇಳಿದಾಗ, ಎಲ್ಲರೂ ಒಪ್ಪಿಕೊಂಡಿದ್ದರು ಎಂದು ಶಿವಕುಮಾರ್ ತಿಳಿಸಿದರು.
ಚುನಾವಣೋತ್ತರ ಸಮೀಕ್ಷೆ ಮೇಲೆ ನಂಬಿಕೆ ಇಲ್ಲ:
ಬಿಹಾರದ ಚುನಾವಣೋತ್ತರ ಸಮೀಕ್ಷೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಚುನಾವಣೋತ್ತರ ಸಮೀಕ್ಷೆಯನ್ನು ನಂಬುವುದಿಲ್ಲ. ಕರ್ನಾಟಕ ಚುನಾವಣೆ ವೇಳೆಯೂ ನಾನು ಈ ಸಮೀಕ್ಷೆಗಳನ್ನು ನಂಬಿರಲಿಲ್ಲ. ಯಾವ ಸಮೀಕ್ಷೆಗಳು ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿರಲಿಲ್ಲ. ಈ ಸಮೀಕ್ಷೆಗಳು ನಮ್ಮ ಪರ ತೋರಿಸಿದರೂ ನಾನು ನಂಬುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ನಡೆದ ಉಪಚುನಾವಣೆ ವೇಳೆಯೂ ನಾನು ಮೂರಕ್ಕೆ ಮೂರು ಗೆಲ್ಲುತ್ತೇವೆ ಎಂದು ಹೇಳಿದ್ದೆ. ಫಲಿತಾಂಶ ಬರಲಿ ನೋಡೋಣ, ಇಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಬಿಹಾರದ ಜನ ಬದಲಾವಣೆ ಬಯಸುತ್ತಿದ್ದು, ಹೀಗಾಗಿ ಮಹಾಘಟಬಂಧನ್ ಗೆಲ್ಲುವ ಭರವಸೆ ಇದೆ. ಜನ ನೀಡುವ ಆಶೀರ್ವಾದ ನಿರಂತರ ಪ್ರಕ್ರಿಯೆ. ಗೆಲುವು ಸೋಲು ಸಹಜ ಎಂದು ಶಿವಕುಮಾರ್ ತಿಳಿಸಿದರು.
ಬಿಹಾರ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಬಿಹಾರ ಚುನಾವಣೆ ರಾಜ್ಯ ರಾಜಕಾರಣದ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ. ಕರ್ನಾಟಕ ಅಭಿವೃದ್ಧಿ, ಸಾಮಾಜಿಕ ಬದಲಾವಣೆಯ ನಾಯಕ ಎಂದು ತಿಳಿಸಿದರು.
ನ.14 ರಂದು ನೀರಿನ ಹೆಜ್ಜೆ ಪುಸ್ತಕ ಬಿಡುಗಡೆ: ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೀರಿನ ಹೆಜ್ಜೆ ಎಂಬ ಪುಸ್ತಕವನ್ನು ನ.14ರಂದು ಬಿಡುಗಡೆ ಮಾಡಲಿದ್ದೇವೆ. ಅಂದು ಮಹಾದಾಯಿ, ಶರಾವತಿ, ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡುತ್ತೇನೆ ಎಂದರು.
ನಾವು ಒಟ್ಟಾಗಿದ್ದೇವೆ, ಮುಂದೆಯೂ ಒಟ್ಟಾಗಿರುತ್ತೇವೆ: ಡಿ.ಕೆ.ಶಿವಕುಮಾರ್ 2028ಕ್ಕೆ ಮುಖ್ಯಮಂತ್ರಿಯಾಗುತ್ತಾರೆ. ಅಲ್ಲಿಯವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳ ಸಂತೋಷ. ಮುಖ್ಯಮಂತ್ರಿ ಇದ್ದಾರೆ, ಇರಲಿ. ಅದರಲ್ಲಿ ತಪ್ಪೇನಿದೆ. ನಮಗೆ ಯಾವುದೇ ಬೇಸರವಿಲ್ಲ. ನಾವು ಅವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇವೆ, ಒಟ್ಟಿಗೆ ಇದ್ದೇವೆ, ಮುಂದೆಯೂ ಒಟ್ಟಿಗೆ ಇರುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸಚಿವರನ್ನು ಭೇಟಿ ಮಾಡಲು ನಿಯೋಗದ ಜೊತೆ ಹೋಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇವಲ ನಿಯೋಗ ಮಾತ್ರವಲ್ಲ. ಈ ಬಾರಿ ದೊಡ್ಡ ಯೋಜನೆ ರೂಪಿಸಿದ್ದೇನೆ. ನಮ್ಮ ಸಂಸದರು ಹೋರಾಟ ಮಾಡಿದರೆ ಮಾತ್ರ ಸಂಸದರಾಗಿರಲು ಅರ್ಹರಿರುತ್ತಾರೆ. ಇಲ್ಲದಿದ್ದರೆ ಅವರು ತಮ್ಮ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದರು.
ನಾನೂ ದಿಲ್ಲಿಗೆ ಹೋಗುತ್ತಿದ್ದೇನೆ: ನ.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಿಲ್ಲಿಗೆ ತೆರಳುತ್ತಿದ್ದು, ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನಾನು ಕೂಡ ದಿಲ್ಲಿಗೆ ಹೋಗುತ್ತಿದ್ದೇನೆ. ಕಪಿಲ್ ಸಿಬಲ್ ನನ್ನ ವಕೀಲರು. ಅವರ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದು, ನಾನು ಹೋಗುತ್ತಿದ್ದೇನೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿಮ್ಮ ಜೊತೆ ಮುಖ್ಯಮಂತ್ರಿ ಚರ್ಚೆ ಮಾಡಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ, ಇದೆಲ್ಲವೂ ಅವರ ಜವಾಬ್ದಾರಿ. ಅವರು ನನ್ನ ಬಳಿ ಈ ಬಗ್ಗೆ ಯಾವುದೆ ಚರ್ಚೆ ಮಾಡಿಲ್ಲ. ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ನಾಲ್ವರು ಅಭ್ಯರ್ಥಿಗಳ ಶಿಫಾರಸ್ಸು ಪಟ್ಟಿಯನ್ನು ಇಂದು ಅಥವಾ ನಾಳೆ ದಿಲ್ಲಿಗೆ ರವಾನಿಸುತ್ತಿದ್ದೇನೆ ಎಂದರು.







