‘ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ’ ಶೀಘ್ರ ರಚನೆ : ಬಿ.ವೈ.ವಿಜಯೇಂದ್ರ

ಬೆಂಗಳೂರು, ಅ. 21: ‘ಬಿಜೆಪಿ-ಜೆಡಿಎಸ್ ಪಕ್ಷಗಳ ಎರಡು ಸಮನ್ವಯ ಸಮಿತಿ ರಚಿಸಲು ಯೋಜಿಸಿದ್ದು, ಪಕ್ಷದ ಮುಖಂಡರ ಜೊತೆ ಚರ್ಚಿಸಿ ಸಮಿತಿಯನ್ನು ಪ್ರಕಟಿಸಲಿದ್ದೇವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಮಂಗಳವಾರ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಅವರು, ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ಕುರಿತು ಚರ್ಚೆ ಸಮಾಲೋಚನೆ ನಡೆಸಿದ್ದು, ಇನ್ನೂ 8ರಿಂದ 10 ದಿನಗಳಲ್ಲಿ ಕುಮಾರಸ್ವಾಮಿ ಸಮನ್ವಯ ಸಮಿತಿಗೆ ಹೆಸರುಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ ಎಂದರು.
ಬಿಜೆಪಿ-ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ರಚನೆ ಕುರಿತು ಸಲಹೆಗಳನ್ನು ಕೇಳಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗಳು ನಡೆಯಲಿದ್ದು, ಬೆಂಗಳೂರಿಗೆ ಸೀಮಿತವಾಗಿ ಒಂದು ಸಮನ್ವಯ ಸಮಿತಿ ಮಾಡೋಣ ಹಾಗೂ ರಾಜ್ಯಕ್ಕೆ ಸಂಬಂಧಿಸಿ ಮತ್ತೊಂದು ಸಮನ್ವಯ ಸಮಿತಿ ಮಾಡುವ ಸಲಹೆಯನ್ನು ಕುಮಾರಸ್ವಾಮಿ ನೀಡಿದ್ದಾರೆ ಎಂದು ವಿಜಯೇಂದ್ರ ವಿವರಿಸಿದರು.
ಆಡಳಿತಾರೂಢ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಹದಗೆಟ್ಟಿದೆ. ರಾಜಧಾನಿ ಬೆಂಗಳೂರು, ರಾಜ್ಯದ ಪರಿಸ್ಥಿತಿ ಹದಗೆಟ್ಟಿದೆ. ಅಭಿವೃದ್ಧಿ ಇಲ್ಲದೇ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಬೆಂಗಳೂರು ಮಹಾನಗರದ ರಸ್ತೆ ಗುಂಡಿಗಳನ್ನು ಸೇರಿದಂತೆ ಮೂಲಸೌಕರ್ಯಗಳ ಅವ್ಯವಸ್ಥೆಯನ್ನು ಎಲ್ಲರೂ ನೋಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಉದ್ಯಮಿಗಳಾದ ಮೋಹನ್‍ದಾಸ್ ಪೈ, ಕಿರಣ್ ಮಜುಂದಾರ್ ಶಾ ಅವರಂತಹ ಹಿರಿಯರು ಬೆಂಗಳೂರಿನ ಬಗ್ಗೆ ಮತ್ತು ರಸ್ತೆಗಳ ಕುರಿತು ಸಲಹೆ ನೀಡಿದರೆ, ಆ ಸಲಹೆಗಳನ್ನು ಸರಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅಂತಹ ಹಿರಿಯರನ್ನು ಸ್ವತಃ ಸಚಿವರೇ ನಿಂದಿಸುತ್ತಿದ್ದಾರೆ, ಇದು ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ವಿಜಯೇಂದ್ರ ಆಕ್ಷೇಪಿಸಿದರು.
ಒಸಿ ದಂಧೆ: ಶಿವಮೊಗ್ಗ ಜಿಲ್ಲೆ ಸೇರಿ ಅನೇಕ ಜಿಲ್ಲೆಗಳಲ್ಲಿ ಇಸ್ಪೀಟ್, ಒಸಿ ಮಟ್ಕಾ ದಂಧೆ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳು, ಆಡಳಿತ ಪಕ್ಷದ ಶಾಸಕರ ಕುಮ್ಮಕ್ಕಿನಿಂದ ಇವು ನಡೆಯುತ್ತಿವೆ. ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಬೇರೆ ರಾಜ್ಯಕ್ಕೆ ತೆರಳಿದಾಗ ಇಲ್ಲಿನ ಗ್ಯಾರಂಟಿ ದೇಶಕ್ಕೇ ಮಾದರಿ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ ಎಂದು ಟೀಕಿಸಿದರು.
ಸರಕಾರದ ಗ್ಯಾರಂಟಿಗಳು ಮಾದರಿಯಲ್ಲ, ಉಡಾಫೆ ಮಾತುಗಳನ್ನು ಬಿಡಿ. ರಾಜ್ಯವನ್ನು ಕೊಳ್ಳೆ ಹೊಡೆಯುವುದನ್ನು ಜನತೆ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವೆಲ್ಲವುಗಳ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ ಜಂಟಿ ಹೋರಾಟ ಮಾಡುವ ಬಗ್ಗೆ ನಿರ್ಧರಿಸಲಿದ್ದೇವೆ ಎಂದು ವಿಜಯೇಂದ್ರ ಎಚ್ಚರಿಸಿದರು.
‘ಸಚಿವ ಪ್ರಿಯಾಂಕ್ ಖರ್ಗೆಗೆ ಯಾಕೆ ದುರ್ಬುದ್ಧಿ ಬಂದಿತೆಂದು ಗೊತ್ತಿಲ್ಲ. ಅನಾವಶ್ಯಕವಾಗಿ ಆರೆಸ್ಸೆಸ್ ಬಗ್ಗೆ ಟೀಕಿಸುವುದು ಸಲ್ಲ. ಇದು ಪ್ರಚಾರ ಗಿಟ್ಟಿಸಿಕೊಳ್ಳುವ ಅಥವಾ ಸಿಎಂ ಕುರ್ಚಿಗೆ ಟವೆಲ್ ಹಾಕುವ ತಂತ್ರವೇ ಗೊತ್ತಿಲ್ಲ. ಪ್ರಿಯಾಂಕ್ ಖರ್ಗೆ ಇವತ್ತು ಏಕಾಂಗಿಯಾಗಿದ್ದಾರೆ. ಆಡಳಿತ ಪಕ್ಷದ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಈ ರೀತಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ನ.2ರಂದು ಚಿತ್ತಾಪುರದಲ್ಲಿ ಯಶಸ್ವಿಯಾಗಿ ಪಥಸಂಚಲನ ಆಗಲಿದೆ’
-ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ







