ಸಿಎಂ ಸಿದ್ದರಾಮಯ್ಯ ಕಾರಿನಲ್ಲೇ ಬಿಜೆಪಿ ನಾಯಕ ರವಿಕುಮಾರ್ ಪ್ರಯಾಣ; ಚರ್ಚೆಗೆ ಗ್ರಾಸ

ಸಾಂದರ್ಭಿಕ ಚಿತ್ರ (Source: ITG)
ಬೆಂಗಳೂರು: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಕುರಿತು ಅವಹೇಳನಕಾರಿ ಪದ ಬಳಸಿದ ಆರೋಪ ಮೇರೆಗೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನಲ್ಲಿಯೇ ಪ್ರಯಾಣ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಬುಧವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಿಂದ ವಿಧಾನಸೌಧಕ್ಕೆ ಸಿದ್ದರಾಮಯ್ಯ ಅವರ ಕಾರಿನಲ್ಲೇ ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗಮಿಸಿದಲ್ಲದೆ, ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುತ್ತ ನಿಂತಿದ್ದ ದೃಶ್ಯ ವಿಧಾನಸೌಧದ ಮುಖ್ಯ ದ್ವಾರದಲ್ಲಿ ಕಂಡುಬಂತು.
ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ವಿರುದ್ಧ ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಸದಸ್ಯ ಎನ್.ರವಿಕುಮಾರ್ ನೀಡಿದಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆಗೆ ಇತ್ತೀಚೆಗಷ್ಟೇ ಭಾರೀ ಆಕ್ರೋಶ ವ್ಯಕ್ತವಾಗಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ ಕೇಳಿಬಂದಿತ್ತು. ಜತೆಗೆ, ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಸಾಮಾನ್ಯವಾಗಿ ಸಿದ್ದರಾಮಯ್ಯ ಅವರ ಕಾರಿನಲ್ಲಿ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಸಚಿವರಾದ ಭೈರತಿ ಸುರೇಶ್, ಝಮೀರ್ ಅಹ್ಮದ್ ಖಾನ್ ಸೇರಿದಂತೆ ಇತರೆ ಕಾಂಗ್ರೆಸ್ ಪ್ರಮುಖ ನಾಯಕರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ, ಬುಧವಾರ ಕಾರಿನಲ್ಲಿ ರವಿಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೇ ಮಾತನಾಡುತ್ತಾ ಬಂದಿರುವುದು ಕುತೂಹಲ ಮೂಡಿಸಿದೆ.







