ಬಿಜೆಪಿ ನಾಯಕರದ್ದು ರಾಜಕೀಯಕ್ಕಾಗಿ ಕನ್ನಡ ವಿರೋಧಿ ಧೋರಣೆ: ಟಿ.ಎ.ನಾರಾಯಣಗೌಡ

ಬೆಂಗಳೂರು: ಬಿಜೆಪಿ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕನ್ನಡ ವಿರೋಧಿ ಧೋರಣೆ ತಾಳುತ್ತಿದ್ದಾರೆ. ಕನ್ನಡಿಗರ ಮೇಲಿನ ಅನಗತ್ಯ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿ ಕಡ್ಡಾಯ ಕಲಿಕೆ ವಿರೋಧಿಸುತ್ತಿರುವವರು ದೇಶದ್ರೋಹಿಗಳು ಎಂದು ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ದ್ವಿಭಾಷಾ ನೀತಿ ಪರವಾಗಿ ಮಾತನಾಡಿದ್ದ ರಾಷ್ಟ್ರಕವಿ ಕುವೆಂಪು ಅವರನ್ನು ಅವರು ದೇಶದ್ರೋಹಿಗಳೆಂದು ಹೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಂದ ಹಿಡಿದು ಕನ್ನಡದ ಹೆಸರಾಂತ ಸಾಹಿತಿಗಳು, ಶಿಕ್ಷಣ ತಜ್ಞರು, ಚಿಂತಕರು ತ್ರಿಭಾಷಾ ನೀತಿಯ ವಿರುದ್ಧ ನಿರಂತರವಾಗಿ ಮಾತನಾಡುತ್ತ ಬಂದಿದ್ದಾರೆ. ಇವರೆಲ್ಲ ದೇಶದ್ರೋಹಿಗಳೇ? ಅಶ್ವತ್ಥ್ ನಾರಾಯಣ್ ಅವರಿಗೆ ಏನಾಗಿದೆ ಎಂದು ಪ್ರಶ್ನಿಸಿದರು.
ಹಿಂದಿ ಹೇರಿಕೆ ಪರವಾಗಿ ಮಾತನಾಡುತ್ತಿರುವವರೇ ನಿಜವಾದ ದೇಶದ್ರೋಹಿಗಳು, ನಾಡದ್ರೋಹಿಗಳು. ಈ ದೇಶವನ್ನು ಕೇವಲ ಹಿಂದಿ ಮತ್ತು ಸಂಸ್ಕೃತ ಎರಡೇ ಭಾಷೆಗಳನ್ನು ಇಟ್ಟುಕೊಂಡು ಆಳಲು ಹೊರಟಿದ್ದೀರಾ? ಈ ನುಡಿಗಳು ಮಾತ್ರ ರಾಷ್ಟ್ರೀಯತೆಯನ್ನು ಮೆರೆಸುವ ಭಾಷೆಗಳೇ? ಹಾಗಿದ್ದರೆ ನಮ್ಮ ಭಾಷೆಗಳೆಲ್ಲ ಏನು? ಎಂದು ಪ್ರಶ್ನಿಸಿದರು.
ಪಾಕಿಸ್ತಾನ ಯಾಕೆ ವಿಭಜನೆ ಆಯಿತು ಎಂಬುದನ್ನು ಬಿಜೆಪಿ ನಾಯಕರು ಮರೆತಿದ್ದಾರೆ. ಭಾಷೆ ಹೋರಾಟದಿಂದಲೇ ಬಾಂಗ್ಲಾದೇಶ ಬೇರೆ ಆಯಿತು. ಭಾರತದಲ್ಲೂ ಅಂಥದ್ದೇ ಆಗಲಿ ಎಂದು ಬಿಜೆಪಿ ನಾಯಕರು ಬಯಸುತ್ತಿದ್ದಾರೆಯೇ? ಹಿಂದಿಯೇತರ ಭಾಷಿಕರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆಯೇ? ಇದರಿಂದ ದೇಶಕ್ಕೆ ಒಳಿತಾಗುವುದಿಲ್ಲ. ಬಿಜೆಪಿ ನಾಯಕರು ತಮಗೆ ದಿಲ್ಲಿಯಿಂದ ಬರುವ ಸಂದೇಶ ಕೇಳಿಕೊಂಡು ನಾಡದ್ರೋಹದ ಮಾತುಗಳನ್ನು ಆಡಬಾರದು ಎಂದು ತಿಳಿಸಿದರು.
‘ಮುಂದಿನ ಚುನಾವಣೆಯಲ್ಲಿ ಗೆದ್ದುಬಂದರೆ ಮತ್ತೆ ತ್ರಿಭಾಷಾ ನೀತಿ ಜಾರಿಗೆ ತರುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳಲಿ ನೋಡೋಣ, ಬಿಜೆಪಿ ನಾಯಕರು ಧೋರಣೆ ಬದಲಾಯಿಸಿಕೊಳ್ಳದಿದ್ದರೆ, ಎಲ್ಲ ಕಡೆಗಳಲ್ಲೂ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಹಾತ್ಮಗಾಂಧಿಯವರನ್ನು ಎಳೆದು ತಂದು ಮಾತನಾಡುತ್ತಿದ್ದಾರೆ. ನಿಮ್ಮ ರಾಜಕಾರಣ ನೀವು ಮಾಡಿಕೊಳ್ಳಿ. ಆದರೆ ಕನ್ನಡದ ತಂಟೆಗೆ ಬರಬೇಡಿ. ಕನ್ನಡದ ಅಸ್ತಿತ್ವದ ವಿರುದ್ಧ ಮಾತನಾಡಿದರೆ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹರುಕು ಮುರುಕು ಹಿಂದಿಯಲ್ಲಿ ಮಾತಾಡಿ ದಿಲ್ಲಿಯ ತಮ್ಮ ನಾಯಕರನ್ನು ಮೆಚ್ಚಿಸಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಿಂದಿ ಕಡ್ಡಾಯ ಕಲಿಕೆಯ ಪರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ವಾಸ್ತವವಾಗಿ ವಿಷಯ ಜ್ಞಾನವೇ ಇಲ್ಲ. ತಮ್ಮ ನಾಯಕರನ್ನು ಓಲೈಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.






