ಬಿಜೆಪಿಗರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.9: ಬಿಜೆಪಿ ನಾಯಕರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ. ಅವರು ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಿ, ಯಾರು ಬೇಡ ಅಂದೋರು? ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟೀಕಾ ಪ್ರಹಾರ ನಡೆಸಿದರು.
ರಾಜ್ಯ ಸರಕಾರದ ವಿರುದ್ಧ ಬಿಜೆಪಿಯವರು ನಡೆಸುತ್ತಿರುವ ಪ್ರತಿಭಟನೆ ಕುರಿತು ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೈತರ ಬಗ್ಗೆ ಬಿಜೆಪಿಯವರಿಗೆ ಕರುಣೆ ಬಂದ ಹಾಗೆ ಇದೆ. ರೈತರ ಪರವಾಗಿ ಬಿಜೆಪಿಯವರು ಏನು ಮಾಡಿದ್ದಾರೆ ಎಂಬ ಒಂದು ಪಟ್ಟಿ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಬಿಜೆಪಿಯವರಿಗೆ ನಾಚಿಕೆ ಆಗಬೇಕು. ರೈತರ ಮೇಲೆ ಗೋಲಿಬಾರ್ ಮಾಡಿಸಿದವರು, ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಚಳಿ, ಮಳೆಯಲ್ಲಿ ನೂರಾರು ಜನ ರೈತರು ಸತ್ತರು. ರೈತರ ಮೇಲೆ ಗಾಡಿ ಹತ್ತಿಸಿದವರು ಯಾರು? ಈಗ ರೈತರ ಬಗ್ಗೆ ಮಾತನಾಡಲು ಬರುತ್ತಾರೆ, ಅವರಿಗೆ ನಾಚಿಕೆಯಾಗಬೇಕು. ಕಾಂಗ್ರೆಸ್ ಪಕ್ಷವಾಗಲಿ, ನಾನಾಗಲಿ, ಎಲ್ಲರೂ ರೈತರ ಪರವೇ ಇದ್ದೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ನಮ್ಮದು ಜಾತ್ಯತೀತ ಸರಕಾರ :
ನಮ್ಮದು ಜಾತ್ಯತೀತ ಸರಕಾರ, ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ಮಹನೀಯರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಟಿಪ್ಪು ಜಯಂತಿಯನ್ನು ಯಾಕೆ ವಿವಾದ ಮಾಡಲಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕೆನ್ನುವುದು ನಮ್ಮ ನಿಲುವು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.







