ಬಿಜೆಪಿ ಕಾರ್ಯಕರ್ತ ಮೇಲೆ ಹಲ್ಲೆ: ತಪ್ಪಿತಸ್ಥರನ್ನು ಸರಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಸಭಾತ್ಯಾಗ
ಸಭಾತ್ಯಾಗದ ವೇಳೆ ಬಿಜೆಪಿ ಶಾಸಕರ ನಡುವೆ ಗೊಂದಲ

ಬೆಳಗಾವಿ(ಸುವರ್ಣ ವಿಧಾನಸೌಧ): ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ ಹಾಗೂ ಅವರ ಸಂಗಡಿಗರು ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಆದರೆ, ಅವರ ವಿರುದ್ಧ ಎಫ್‍ಐಆರ್ ನಲ್ಲಿ ಸಮರ್ಪಕವಾದ ಸೆಕ್ಷನ್‍ಗಳನ್ನು ಹಾಕಲಿಲ್ಲ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರಾದ ಬಿ.ವೈ.ವಿಜಯೇಂದ್ರ, ಸುನೀಲ್ ಕುಮಾರ್, ಅಭಯ್ ಪಾಟೀಲ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಇನ್ನಿತರರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯದ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ ಉತ್ತರವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಿತ್ ಜಾಧವ್, ಸದ್ದಾಂ, ಚನ್ನರಾಜ ಹಟ್ಟಿಹೋಳಿ ಹಾಗೂ ಅವರ ಇಬ್ಬರು ಅಂಗರಕ್ಷಕರ ವಿರುದ್ಧ ತಿಲಕವಾಡಿ ಎಪಿಎಂಸಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಎಸಿಪಿ ತನಿಖೆ ಆರಂಭಿಸಿದ್ದು, ತನಿಖೆ ಪೂರ್ಣ ಆದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ಪರಮೇಶ್ವರ್ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ವಿಜಯೇಂದ್ರ, ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದೆ. ಆದರೆ, ಎಫ್‍ಐಆರ್ ನಲ್ಲಿ ಆರೋಪಿಗಳ ವಿರುದ್ಧ ಕೇವಲ ಫೋನ್ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ ಎಂದಷ್ಟೆ ವಿವರಿಸಲಾಗಿದೆ. ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದು, ಹತ್ಯೆಗೆ ಯತ್ನಿಸಿದ ವಿಚಾರ ಎಫ್‍ಐಆರ್ ನಲ್ಲಿ ಇಲ್ಲ. ಪ್ರಕರಣವನ್ನು ಮುಚ್ಚಿ ಹಾಕಲು ಸರಕಾರ ಯತ್ನಿಸುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಪೊಲೀಸರಿಗೆ ಪೃಥ್ವಿ ಸಿಂಗ್ ಕುಟುಂಬದವರು ನೀಡಿರುವ ದೂರಿನಲ್ಲಿರುವ ಅಂಶಗಳೆ ಎಫ್‍ಐಆರ್ ನಲ್ಲಿ ಇದೆ. ಪ್ರಕರಣದಲ್ಲಿ ಹತ್ಯೆ ಯತ್ನಕ್ಕೆ ಸಂಬಂಧಿಸಿದ ವಿಚಾರಗಳು ಗಮನಕ್ಕೆ ತಂದರೆ ಪೊಲೀಸರು ಅದಕ್ಕೆ ತಕ್ಕಂತೆ ಸೆಕ್ಷನ್‍ಗಳನ್ನು ಹಾಕುತ್ತಾರೆ ಎಂದರು.
ಇದೇ ವೇಳೆ ಬಿಜೆಪಿ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಮಾತನಾಡಿ, ಇಡೀ ಪ್ರಕರಣ ಮುಚ್ಚಿಹಾಕಲು ಸೆಕ್ಷನ್ ಗಳಲ್ಲಿ ವ್ಯತ್ಯಾಸಗಳನ್ನು ಮಾಡಿದ್ದಾರೆ. ಇದೊಂದು ಸರಕಾರಿ ಪ್ರಾಯೋಜಿತ ಕೊಲೆ ಯತ್ನ ಎಂದು ಕಂಡು ಬರುತ್ತಿದೆ ಎಂದು ದೂರಿದರು.
ನಂತರ ಬಿಜೆಪಿ ಸದಸ್ಯ ಅಭಯ್ ಪಾಟೀಲ್ ಹಾಗೂ ಯತ್ನಾಳ್ ಪ್ರಸ್ತಾಪಿಸಿದ ಮತ್ತೊಂದು ವಿಷಯದ ಕುರಿತು ಉತ್ತರಿಸಿದ ಪರಮೇಶ್ವರ್, ಮನೆಯ ಮೇಲೆ ಪಾಲಿಕೆಯ ಅನುಮತಿಯಿಲ್ಲದೆ ಮೊಬೈಲ್ ಸ್ಥಾವರ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲಕ ರಮೇಶ್ ಪಾಟೀಲ್ ಹಾಗೂ ಪಾಲಿಕೆ ಸದಸ್ಯ ಅಭಿಜಿತ್ ಜವಾಳ್ಕರ್ ನಡುವೆ ನಡೆದ ಗಲಾಟೆ ಪ್ರಕರಣದಲ್ಲಿಯೂ ಪೊಲೀಸರು ಕಾನೂನು ಉಲ್ಲಂಘಿಸಿಲ್ಲ ಎಂದರು.
ಅಭಿಜಿತ್ ಜವಾಳ್ಕರ್ ಅವರನ್ನು ಬಲವಂತದಿಂದ ಆಸ್ಪತ್ರೆಯಿಂದ ಪೊಲೀಸರು ಕರೆದೊಯ್ಯಲಾಗಿದೆ ಎಂದು ಸತ್ಯಕ್ಕೆ ದೂರವಾದ ವಿಚಾರ. ಈ ಸಂಬಂಧ ಅವರೇ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆದು, ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಬಿಜೆಪಿ ಶಾಸಕರ ನಡುವೆ ಗೊಂದಲ
ಪೃಥ್ವಿ ಸಿಂಗ್ ಹಾಗೂ ಅಭಿಜಿತ್ ಜವಾಳ್ಕರ್ ಪ್ರಕರಣದ ಕುರಿತು ಗೃಹ ಸಚಿವರ ಉತ್ತರಕ್ಕೆ ತೃಪ್ತರಾಗದೆ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಶಾಸಕರು ಸದನದ ಬಾವಿಗಿಳಿದು ಧರಣಿಗೆ ಮುಂದಾದರು. ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್, ಸಭಾತ್ಯಾಗ ಮಾಡುವುದಾಗಿ ಹೇಳಿ ಹೊರನಡೆದರು. ಆಗ ಬಿಜೆಪಿ ಶಾಸಕರು ಧರಣಿ ಮಾಡಬೇಕೋ, ಸಭಾತ್ಯಾಗ ಮಾಡಬೇಕೋ ಎಂದು ಕೆಲಕಾಲ ಗೊಂದಲಕ್ಕೆ ಸಿಲುಕಿದ್ದರು.







