ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್-ಸಂಸದ ಡಾ.ಕೆ.ಸುಧಾಕರ್ ನಡುವೆ ಮಾತಿನ ಸಮರ

ಡಾ.ಕೆ.ಸುಧಾಕರ್ / ಎಸ್.ಆರ್.ವಿಶ್ವನಾಥ್
ಬೆಂಗಳೂರು : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆರಂಭವಾದ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ನಡುವಿನ ಮಾತಿನ ಸಮರ ಪುನಃ ಆರಂಭವಾಗಿದೆ.
ಶುಕ್ರವಾರ ಚಿಕ್ಕಬಳ್ಳಾಪುರದಲ್ಲಿ ಪತ್ರಿಕಾಗೋಷ್ಠಿ ಮಾಡಿದ ಎಸ್.ಆರ್.ವಿಶ್ವನಾಥ್, ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ನಾವು ಸಂದೀಪ್ ರೆಡ್ಡಿಗೆ ಬಿಜೆಪಿ ಟಿಕೆಟ್ ಕೇಳುತ್ತೇವೆ. ಇಲ್ಲಿನ ಜನರು ಅನುಮತಿ ನೀಡಿದರೆ ನಾನೇ ಸ್ಪರ್ಧಿಸುತ್ತೇನೆ’ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಡಾ.ಕೆ.ಸುಧಾಕರ್, ‘ಚಿಕ್ಕಬಳ್ಳಾಪುರಕ್ಕೆ ಸ್ವಾಗತ’ ಎಂದು ತಿರುಗೇಟು ನೀಡಿದ್ದರು. ಸುಧಾಕರ್ ಮಾತಿಗೆ ಕೆರಳಿರುವ ವಿಶ್ವನಾಥ್, ‘ಬೆಣ್ಣೆ ಮಾತು ಇಲ್ಲಿ ನಡೆಯೋದಿಲ್ಲ. ನೀನು ಪಕ್ಷೇತರ ಅಭ್ಯರ್ಥಿ ಅಥವಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸು. ನನಗೆ ಬಿಜೆಪಿ ಇದೆ, ನೀನು ಬಂದು ಇಲ್ಲಿ ಬಂದು ಚುನಾವಣೆಗೆ ನಿಲ್ಲು, ಆ ಮೇಲೆ ತೋರಿಸ್ತೀನಿ’ ಎಂದು ಹೇಳಿದರು.
‘ನನ್ನ ವಿಷಯಕ್ಕೆ ಬಂದರೆ ಸುಧಾಕರ್ ಬುಡಕ್ಕೆ ಕೈ ಹಾಕುತ್ತೇನೆ. ಪಕ್ಷ ಹಾಗೂ ಕಾರ್ಯಕರ್ತರನ್ನು ವಿಭಜಿಸುವ ಕೆಲಸ ಮಾಡುತ್ತಿದ್ದೀರಾ. ಚಿಕ್ಕಬಳ್ಳಾಪುರ ನಮ್ಮ ತಾಯಿಯ ಊರಿದ್ದು. ನಿಮ್ಮ ಸ್ವಾಗತ ನನಗೆ ಬೇಡ. ದುರಹಂಕಾರದಿಂದ ಪಕ್ಷದ ಅಧ್ಯಕ್ಷರನ್ನು ಬೈಯುತ್ತೀರಿ. ಆದರೆ, ನನಗೆ ಆ ಅಂತಹ ದುರಹಂಕಾರ ಇಲ್ಲ’ ಎಂದು ವಿಶ್ವನಾಥ್ ತಿಳಿಸಿದರು.




