ಬಿಜೆಪಿ ಶಾಸಕ ಸುರೇಶ್ ಕುಮಾರ್ ಕಚೇರಿಗೆ ಮುತ್ತಿಗೆ ಹಾಕಲು ‘ಕೈ’ ಕಾರ್ಯಕರ್ತರ ಯತ್ನ

ಬಿಜೆಪಿ ಶಾಸಕ ಸುರೇಶ್ ಕುಮಾರ್
ಬೆಂಗಳೂರು : ರಾಜಾಜಿನಗರ ಕ್ಷೇತ್ರದ ಬಿಜೆಪಿಯ ಶಾಸಕ ಎಸ್.ಸುರೇಶ್ ಕುಮಾರ್ ಅಧಿಕಾರ ದುರುಪಯೋಗಪಡಿಸಿಕೊಂಡು, ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಟ್ಟು, ಸರಕಾರದ ಖಜಾನೆಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಲೋಕಾಯುಕ್ತದಲ್ಲಿ ದೂರು ದಾಖಲಾದ ಬೆನ್ನಲ್ಲೆ, ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಜನ ಸಂಪರ್ಕ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಇಲ್ಲಿನ ರಾಜಾಜಿನಗರದ ಆರ್ಟಿಒ ಕಚೇರಿ ಕಟ್ಟಡದಲ್ಲಿರುವ ಶಾಸಕರ ಜನಸಂಪರ್ಕ ಕಚೇರಿ ಒಳಗೆ ನುಗ್ಗಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದಕ್ಕೆ ಬಿಜೆಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟಗಳನ್ನು ಹಿಡಿದು ಪರ-ವಿರೋಧ ಘೋಷಣೆಗಳನ್ನು ಕೂಗಿದರು.
ಅಲ್ಲದೆ, ಪ್ರತಿಭಟನೆಯೂ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಅಲ್ಲಿಂದ ಸ್ಥಳಾಂತರಿಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಸಕ ಸುರೇಶ್ ಕುಮಾರ್ ಜನಸಂಪರ್ಕ ಕಚೇರಿ ಒಳಗೆ ಸಭೆ ನಡೆಸುತ್ತಿದ್ದರು.
ಆಯುಕ್ತರಿಗೆ ಸುರೇಶ್ ಕುಮಾರ್ ಪತ್ರ: ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಉದ್ಯಾನವನ ಬಿಟ್ಟು ಬೇರೆ ಕಡೆ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಆದರೂ, ತಮ್ಮ ಕಚೇರಿ ಬಳಿ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿದ್ದು ಯಾಕೆ? ಇದನ್ನು ಪ್ರಶ್ನಿಸಿದ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ.
ನಾನು ನಡೆಸುತ್ತಿದ್ದ ‘ಜನರೊಂದಿಗೆ ಜನಸೇವಕ’ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ, ಸಾರ್ವಜನಿಕರು ಬರದಂತೆ ತಡೆದಿದ್ದಾರೆ. ಈ ಕುರಿತು ಸೂಕ್ತ ವಿಚಾರಣೆ ನಡೆಸಬೇಕು, ಅಲ್ಲದೆ, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ನಗರ ಪೊಲೀಸ್ ಆಯುಕ್ತರಿಗೆ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಬಿಜೆಪಿ ಆಕ್ರೋಶ: ಸುರೇಶ್ ಕುಮಾರ್ ಅವರ ಕಚೇರಿಗೆ ನುಗ್ಗಿ, ಅವರ ಮೇಲೆ ಕಾಂಗ್ರೆಸ್ ಗೂಂಡಾಗಳು ಹಲ್ಲೆಗೆ ಯತ್ನಿಸಿರುವುದು ಖಂಡನೀಯ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಸರಕಾರದಲ್ಲಿ ಶಾಸಕರಿಗೇ ರಕ್ಷಣೆಯಿಲ್ಲವೇ? ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆಯವರೇ ಫೇಸ್ಬುಕ್ ಕಾಮೆಂಟ್ಗಳಿಗೆಲ್ಲಾ ತಲೆಕೆಡಿಸಿಕೊಂಡು, ಕಾಮೆಂಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡುವ ನಿಮಗೆ ನಿಮ್ಮ ಕಾರ್ಯಕರ್ತರ ಈ ಗೂಂಡಾಗಿರಿ ಕಣ್ಣಿಗೆ ಕಾಣುವುದಿಲ್ಲವೇ? ಎಂದು ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದೆ.






