ಹಲವು ನಾಯಕರು ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ: ಬಿಜೆಪಿಯ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅಸಮಾಧಾನ
“ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ”

ಪ್ರದೀಪ್ ಶೆಟ್ಟರ್
ಹುಬ್ಬಳ್ಳಿ: ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಪ್ರವೃತ್ತಿಯಿಂದ ಬೇಸತ್ತು ಸಮುದಾಯದ ಅನೇಕ ನಾಯಕರು ಬಿಜೆಪಿ ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ ಎಂದು ಬಿಜೆಪಿಯ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದ್ದಂತಿದೆ. ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬವಾಗುತ್ತಿದೆ. ರಾಜ್ಯಾಧ್ಯಕ್ಷರ ಆಯ್ಕೆಯೂ ಆಗುತ್ತಿಲ್ಲ. ಬಿಜೆಪಿಯಲ್ಲಿ ಯಾರೂ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದಲ್ಲಿ ನಾಯಕತ್ವವಿಲ್ಲದೆ ಹೋದರೆ ನಾವು ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು? ವಿರೋಧ ಪಕ್ಷದ ನಾಯಕನ ಆಯ್ಕೆಯನ್ನು ಯಾವ ಕಾರಣಕ್ಕೆ ಇಷ್ಟು ವಿಳಂಬ ಮಾಡಲಾಗುತ್ತಿದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ ಎಂದರು.
ಬಿಜೆಪಿ ಮೊದಲು ರಾಜ್ಯ ಉಸ್ತುವಾರಿಯನ್ನು ಬದಲಾಯಿಸಬೇಕು. ಅಲ್ಲದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ನಾಯಕರಿಗೆ ಹೆಚ್ಚಿನ ಅವಕಾಶವನ್ನು ಕೊಟ್ಟರೆ ಮಾತ್ರ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ಅವರು ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಈಗಿರುವ ಲಿಂಗಾಯತ ನಾಯಕರನ್ನು ತುಳಿಯುವ ಕೆಲಸವನ್ನು ನಿಲ್ಲಿಸದಿದ್ದರೆ, ಬಿಜೆಪಿ ಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಲಿಂಗಾಯತರನ್ನು ಕಡೆಗಣಿಸಿದ ಕಾರಣಕ್ಕಾಗಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲುವಂತಾಯಿತು.
-ಪ್ರದೀಪ್ ಶೆಟ್ಟರ್, ಬಿಜೆಪಿಯ ಪರಿಷತ್ ಸದಸ್ಯ







