ʼಕರ್ನಾಟಕ ಲೂಟಿ-ಕಾಂಗ್ರೆಸ್ ಡ್ಯೂಟಿ’ ಬಿಜೆಪಿಯಿಂದ ಪೋಸ್ಟರ್ ಬಿಡುಗಡೆ

Screengrab:X/@drashwathcn
ಬೆಂಗಳೂರು: ಕಾಂಗ್ರೆಸ್ ಸರಕಾರದಿಂದ ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ, ‘ಕರ್ನಾಟಕ ಲೂಟಿ-ಕಾಂಗ್ರೆಸ್ ಡ್ಯೂಟಿ’ ಪೋಸ್ಟರ್ ಬಿಡುಗಡೆ ಮಾಡಿದೆ. ಸರಕಾರ ಅತ್ತ ಸಾಧನಾ ಸಮಾವೇಶ ಮಾಡುತ್ತಿದ್ದರೆ, ಇತ್ತ ಬೆಂಗಳೂರು ಮಹಾನಗರದಲ್ಲಿ ಸುರಿದ ಮಳೆಗೆ ಈ ಸರಕಾರದ ಸಾಧನೆಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ ಎಂದು ಲೇವಡಿ ಮಾಡಿದೆ.
ಸೋಮವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ರಾಜ್ಯ ಸರಕಾರ 2 ವರ್ಷಗಳಲ್ಲಿ ಮಾಡಿ ಸಾಧನೆಯನ್ನು ರಾಜ್ಯದ ಜನತೆಗೆ ತೋರಿಸುವುದಕ್ಕೆ ಬಳ್ಳಾರಿಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದೆ. ಆದರೆ ಹವಾಮಾನ ಇಲಾಖೆಯು ಒಂದು ವಾರದ ಮುಂಚೆ ಮಳೆಯ ಮುನ್ಸೂಚನೆ ನೀಡಿದ್ದರೂ, ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೆ, ಬೆಂಗಳೂರು ಮಹಾನಗರದಲ್ಲಿ ಆಗಿರುವ ಮಳೆಯ ಅವಾಂತರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇರಕಾರಣ ಎಂದು ಆರೋಪಿಸಿದರು.
ಬೆಂಗಳೂರು ನಗರವನ್ನು ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿಕೊಂಡು ಬಂದು, ಹಿಂದಿನ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಮಸೂದೆಗೆ ಅನುಮೋದನೆ ಪಡೆದುಕೊಂಡ ನಂತರ ಬ್ರ್ಯಾಂಡ್ ಬೆಂಗಳೂರು ಹೋಗಿ ಗ್ರೇಟರ್ ಬೆಂಗಳೂರು ಆಗಿದೆ. ಗ್ರೇಟರ್ ಬೆಂಗಳೂರು ಹೋಗಿ ಮುಳುಗಡೆ ಬೆಂಗಳೂರು ಆಗಿದೆ. ಇದು ರಾಜ್ಯ ಸರಕಾರದ ಸಾಧನೆ ಎಂದು ಅವರು ಟೀಕಿಸಿದರು.
ಬೆಂಗಳೂರು ಮಹಾನಗರದಿಂದ ಕೋಟ್ಯಂತರ ರೂ.ತೆರಿಗೆ ಹಣ ಸಂಗ್ರಹವಾದರೂ, ಬೆಂಗಳೂರಿನಲ್ಲಿ ಯಾವುದೇ ಒಂದು ಅಭಿವೃದ್ಧಿ ಕಾರ್ಯವನ್ನು ಉಸ್ತುವಾರಿಯಾದ ಡಿ.ಕೆ.ಶಿವಕುಮಾರ್ ಮಾಡಿರುವುದಿಲ್ಲ. ಆದರೆ, ಇವರು ಒಂದು ವಾರದಿಂದ ಪ್ರಚಾರದ ಸಲುವಾಗಿ ದಿನಪತ್ರಿಕೆಗಳಲ್ಲಿ ಜಾಹಿರಾತು ನೀಡುತ್ತಿರುವುದೇ ಇವರ ಸಾಧನೆಯಾಗಿದೆ ಎಂದು ಅವರು ದೂರಿದರು.
ಜೂನ್ ತಿಂಗಳ ಮುನ್ನ ಅಂದರೆ ಮೇ ಮೊದಲ ವಾರದಲ್ಲಿ ಮುಂಗಾರು ಪ್ರಾರಂಭವಾಗಿ ಹೆಚ್ಚಿನ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿತ್ತು. ಆದರೂ, ಸರಕಾರ ಮತ್ತು ಬಿಬಿಎಂಪಿ ಆಡಳಿತ ಭಾಗವಾದ ಗ್ರೇಟರ್ ಬೆಂಗಳೂರು ಮಳೆ ಆವಾಂತರ ಮುಂಜಾಗ್ರತ ಕ್ರಮದ ಬಗ್ಗೆ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿರುವುದಿಲ್ಲ ಎಂದು ಅವರು ಆರೋಪಿಸಿದರು.
ಆಯುಕ್ತ ತುಷಾರ್ ಗಿರಿನಾಥ್ ಪತ್ರಿಕೆಗಳಲ್ಲಿ ಮತ್ತು ಡಿ.ಕೆ.ಶಿವಕುಮಾರ್ ಜೊತೆಯಲ್ಲಿ ಹೇಳಿಕೆಗಳನ್ನು ಕೊಡುವುದು ಮತ್ತು ಸರಕಾರಕ್ಕೆ ಆದಾಯವನ್ನು ಗಳಿಸಿಕೊಡುವುದರ ಮುಖೇನ ಕಾಲ ಕಳೆದರು. ಹೊರತಾಗಿ ಯಾವುದೇ ರೀತಿಯ ನಯಾ ಪೈಸೆ ಕೆಲಸವನ್ನು ಮಾಡಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಮೈಸೂರಿನ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರದ 2ವರ್ಷದ ಆಡಳಿತದಲ್ಲಿ ಮಾಡಿದ ಶೂನ್ಯ ಸಾಧನೆಯನ್ನು ಬಹಿರಂಗಗೊಳಿಸಲಾಯಿತು.#congressfailskarnataka pic.twitter.com/6sCVLaH2Oc
— Dr. C.N. Ashwath Narayan (@drashwathcn) May 19, 2025