ಪಾಕಿಸ್ತಾನ ಜತೆಗಿನ ಪಂದ್ಯದ ಬಗ್ಗೆ ಬಿಜೆಪಿ ಬಾಯಿ ಬಿಡಲಿ: ಸಚಿವ ಸಂತೋಷ್ ಲಾಡ್

ಬೆಂಗಳೂರು: ಪಾಕಿಸ್ತಾನ ಜತೆ ಕ್ರಿಕೆಟ್ ಪಂದ್ಯ ಆಡಿದ ಬಗ್ಗೆ ಬಿಜೆಪಿ ನಾಯಕರು ಬಾಯಿಬಿಟ್ಟು ಮಾತಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಮತಾಂತರ ಆದವರಿಗೆ ಮೂಲ ಜಾತಿ ಜೊತೆ ಧರ್ಮ ನಮೂದು ಮಾಡುವ ಬಗ್ಗೆ ಕಾಲಂ ಇರುವ ಬಗ್ಗೆ ಬಿಜೆಪಿ ವಿರೋಧ ಮಾಡುತ್ತಿದೆ. ಆದರೆ, ಪಾಕಿಸ್ತಾನದ ಜೊತೆ ಪಂದ್ಯ ಆಡಿದ ಬಗ್ಗೆ ಬಿಜೆಪಿ ಅವರು ವಿರೋಧ ಮಾಡಲಿ ನೋಡೋಣ ಎಂದರು.
ಜಾತಿ, ಧರ್ಮ ಬಂದರೆ ಮಾತ್ರ ಇವರು ವಿರೋಧ ಮಾಡೋದು. ನಾಚಿಕೆ, ಮಾನ-ಮರ್ಯಾದೆ ಇದೆಯಾ ಇವರಿಗೆ ಎಂದು ಟೀಕಿಸಿದ ಅವರು, ʼಆಪರೇಷನ್ ಸಿಂಧೂರʼ ಎಂದು ದೊಡ್ಡ ದೊಡ್ಡ ಭಾಷಣ ಮಾಡಿದರು. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಐಸಿಸಿ ಅಧ್ಯಕ್ಷರಾಗಿರುವ ಸಂದರ್ಭದಲ್ಲಿಯೇ ಪಾಕಿಸ್ತಾನ ಜತೆ ಪಂದ್ಯ ನಡೆಸಲಾಗಿದೆ. ಇದನ್ನು ಪ್ರಶ್ನೆ ಮಾಡುವ ಧೈರ್ಯವನ್ನು ಬಿಜೆಪಿ ನಾಯಕರು ಮಾಡಲಿ ಎಂದು ಹೇಳಿದರು.
ಬಿಜೆಪಿಯವರಿಗೆ ಪಾಕಿಸ್ತಾನ, ಮುಸ್ಲಿಮರು ಇಲ್ಲದೆ ವ್ಯವಹಾರ ಇಲ್ಲ. ಇದನ್ನು ಇಟ್ಟುಕೊಂಡು ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದರಿಂದಲೇ ಬಿಜೆಪಿ ಅವರು ಜೀವನ ಮಾಡುತ್ತಿರುವುದು. ಧರ್ಮ ಎನ್ನುವುದು ಪ್ರತಿಯೊಬ್ಬರ ಇಚ್ಛೆ. ನಾವು ಅದನು ಗೌರವಿಸಬೇಕು. ಬಿಜೆಪಿ ನಾಯಕರು ಇದರಲ್ಲಿ ರಾಜಕೀಯ ಬಿಟ್ಟು ಹೊರಬರಲಿ ಎಂದು ಸಚಿವರು ಹೇಳಿದರು.





