ರವಿಕುಮಾರ್ ವಿರುದ್ಧ ಸದನದಲ್ಲಿ ಹೋರಾಟ: ಬಿ.ಕೆ. ಹರಿಪ್ರಸಾದ್
"ಬಿಜೆಪಿ ಸಂಸ್ಕೃತಿಯೇ ಹೆಣ್ಣುಮಕ್ಕಳಿಗೆ ಅವಹೇಳನಕಾರಿಯಾಗಿ ಮಾತನಾಡುವುದು"

ಬಿ.ಕೆ. ಹರಿಪ್ರಸಾದ್ / ರವಿಕುಮಾರ್
ಬೆಂಗಳೂರು: ವಿಧಾನ ಪರಿಷತ್ತಿನ ವಿಪಕ್ಷ ಸಚೇತಕ ರವಿಕುಮಾರ್ ಅನ್ನು ವಜಾಗೊಳಿಸುವಂತೆ ಒತ್ತಾಯಿಸಿದ ಮೇಲ್ಮನೆ ಸದನದಲ್ಲಿ ಹೋರಾಟ ನಡೆಸಲಾಗುವುದು ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ನಿಂದನೆ ಮಾಡಿರುವ ರವಿಕುಮಾರ್ ವಿರುದ್ಧ ಈಗಾಗಲೇ ಪರಿಷತ್ತಿನ ಸಭಾಪತಿಗಳಿಗೆ ದೂರು ಸಲ್ಲಿಸಲಾಗಿದೆ.ಅವರು ಸದನಕ್ಕೆ ಅಗೌರವ ತಂದಿದ್ದಾರೆ, ಅವರನ್ನು ವಜಾ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದರು.
ಅಲ್ಲದೆ, ಇಂತಹ ಭಾಷೆ ಪ್ರಯೋಗ ಸರಿಯಲ್ಲ ಎಂದು ಹೇಳಿದ್ದೇವೆ. ಸಭಾಪತಿಗಳು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೊಣ. ಸದನ ಪ್ರಾರಂಭವಾದಾಗ ಈ ವಿಷಯ ಪ್ರಸ್ತಾಪ ಮಾಡುತ್ತೇವೆ ಎಂದು ಹರಿಪ್ರಸಾದ್ ಹೇಳಿದರು.
ಬಿಜೆಪಿಯಿಂದ ಎಂಎಲ್ಸಿ ರವಿಕುಮಾರ್ ಸಮರ್ಥನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಮರ್ಥನೆ ಮಾಡಿಕೊಳ್ಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಇಂತಹ ಕೀಳು ಭಾಷೆ ಬಳಸುವುದರಲ್ಲಿ ಈ ನಾಗಪುರದ ಗೋಬರ್ ಯುನಿವರ್ಸಿಟಿಗಳು ಡಾಕ್ಟರೇಟ್ ತೆಗೆದುಕೊಂಡಿದ್ದಾರೆ. ಎಲ್ಲಿವರೆಗೂ ಗೋಬರ್ ಯುನಿವರ್ಸಿಟಿ, ಎಲ್ಲಿಯವರೆಗೆ ನಾಗಪುರ ಯುನಿವರ್ಸಿಟಿಯನ್ನು ನಾವು ರದ್ದು ಮಾಡುವುದಿಲ್ಲವೋ, ಅಲ್ಲಿವರೆಗೂ ಇದು ಹೀಗೆಯೇ ಇರುತ್ತದೆ ಎಂದು ವಾಗ್ದಾಳಿ ನಡೆಸಿದರು.
ರವಿಕುಮಾರ್ ಹೀಗೆ ಮಾತಾಡಿರೋದು ಹೊಸದೇನು ಅಲ್ಲ. ಬಿಜೆಪಿ ಸಂಸ್ಕೃತಿಯೇ ಹೆಣ್ಣುಮಕ್ಕಳಿಗೆ ಅವಹೇಳನಕಾರಿಯಾಗಿ ಮಾತನಾಡುವುದು. ಬಿಜೆಪಿ ಅವರಿಂದ ಇದನ್ನು ಬಿಟ್ಟು ಬೇರೆ ಏನೂ ನಿರೀಕ್ಷೆ ಮಾಡಲು ಆಗುವುದಿಲ್ಲ. ರವಿಕುಮಾರ್ ಪ್ರಕರಣದಲ್ಲಿ ಕೋರ್ಟ್ ಎಫ್ಐಆರ್ ರದ್ದು ಮಾಡಿಲ್ಲ. ಅದೇ ಸಂತೋಷದ ಸುದ್ದಿ ಎಂದು ಅವರು ಹೇಳಿದರು.
ಬಿಜೆಪಿಯವರು ಎರಡು ವರ್ಷವಾದರೂ ಕೇಂದ್ರದಲ್ಲಿ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಮಹಿಳೆಯರನ್ನು ಹುಡುಕುತ್ತಿದ್ದಾರೆ. ಅರ್ಧನಾರೇಶ್ವರರನ್ನು ಹುಡುಕಿದರೂ ಬಹಳ ಸಂತೋಷ ಎಂದು ವ್ಯಂಗ್ಯವಾಡಿದ ಅವರು, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲಿ ಎಂದರು.







