ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ನಿವೇಶನ ನೀಡಲು ಸರಕಾರಕ್ಕೆ ಒತ್ತಾಯ : ಪರಿಷತ್‍ನಲ್ಲಿ ‘ವಾರ್ತಾಭಾರತಿ’ ವರದಿ ಉಲ್ಲೇಖಿಸಿದ ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಆ.13: ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ವಿಶೇಷ ಸೌಲಭ್ಯದಡಿ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಬುಧವಾರ ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸರಕಾರವನ್ನು ಒತ್ತಾಯಿಸಿದರು.
ಆ.8ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ‘ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರ ಯಾತನೆ; ನಿವೇಶನ, ಪಿಂಚಣಿ ಹೆಚ್ಚಳಕ್ಕೆ ಬೇಡಿಕೆ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವಿಶೇಷ ವರದಿಯನ್ನು ಸದನದಲ್ಲಿ ಪ್ರಸ್ತಾಪಿಸಿದ ಬಿ.ಕೆ.ಹರಿಪ್ರಸಾದ್, ‘ಆಸಿಡ್ ದಾಳಿಯ ಘಟನೆಗಳು ಬದುಕುಳಿದವರ ಮೇಲೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಪರಿಣಾಮ ಬೀರುತ್ತದೆ’ ಎಂದರು.
ಪ್ರೇಮ ವೈಫಲ್ಯ ಪ್ರಕರಣಗಳು, ಕುಟುಂಬ ಕಲಹ, ಕೆಲಸದ ಸ್ಥಳಗಳಲ್ಲಿ ಆಸಿಡ್ ದಾಳಿಗೆ ಒಳಗಾಗಿರುವ ಅವಿವಾಹಿತ ಯುವತಿಯರ ಪಾಡು ಕೂಡ ಶೋಚನಿಯ ಸ್ಥಿತಿಗೆ ತಲುಪಿದೆ. ಕಣ್ಣು, ಮೂಗು, ಕಿವಿ ಎಲ್ಲವನ್ನು ಕಳೆದುಕೊಂಡವರು ನಮ್ಮೊಡನೆ ಇದ್ದಾರೆ, ಕೆಲವರ ಕುತ್ತಿಗೆ ಮೇಲೆತ್ತಲು ಆಗುವುದಿಲ್ಲ, ಕೈಗಳ ಸ್ನಾಯುಗಳು ಕೂಡ ಅಸಹಾಯಕವಾಗಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ರಾಜ್ಯದಲ್ಲಿ 1999ರಿಂದ ಇಲ್ಲಿಯ ವರೆಗೆ 150ಕ್ಕೂ ಹೆಚ್ಚು ಜನ ಆ್ಯಸಿಡ್ ದಾಳಿಗೆ ಒಳಗಾಗಿದ್ದಾರೆ. ಸರಕಾರದ ಹಲವು ಇಲಾಖೆಗಳ ಯೋಜನೆಗಳಲ್ಲಿ 3 ಲಕ್ಷ ರೂ. ಪರಿಹಾರ ಧನ, 10 ಸಾವಿರ ರೂ.ಗಳ ಮಾಸಶನ, ಚಿಕಿತ್ಸೆ ಸಲುವಾಗಿ 20 ಲಕ್ಷ ರೂ.ಗಳವರೆಗೆ ವೆಚ್ಚ ಮಾಡುವುದು, ಹೀಗೆ ಹಲವು ಯೋಜನೆಗಳಿವೆ. ಆದಾಗ್ಯೂ ಆ್ಯಸಿಡ್ ದಾಳಿಗೆ ಒಳಗಾದ 50ಕ್ಕೂ ಹೆಚ್ಚು ಮಂದಿಗೆ ಸ್ವಂತ ಸೂರು ಇಲ್ಲದಿರುವುದರಿಂದ ನಿವೇಶನ ಸಲುವಾಗಿ 20 ವರ್ಷಗಳಿಂದ ಸರಕಾರದ ಕಚೇರಿಗಳಿಗೆ ಎಡತಾಕುತ್ತಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಸರಕಾರ ಇವರಿಗೆ ನೀಡುತ್ತಿರುವ ಪಿಂಚಣಿಯನ್ನು ಹೆಚ್ಚಿಸಬೇಕು, ಸಮಾಜದ ಮುಖ್ಯವಾಹಿನಿಯಿಂದ ದೂರ ಸರಿದು ತೆರೆಯ ಹಿಂದೆ ಬದುಕು ಸಾಗಿಸುತ್ತಿರುವ, ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಇವರ ನೆರವಿಗೆ ಧಾವಿಸಬೇಕು ಎಂದು ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದರು.







