ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿಯೂ ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳಬೇಕು : ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಅ. 12 : ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ವು ಭಾರತದ ತಾಲಿಬಾನ್ ಇದ್ದಂತೆ. ಲಾಠಿ, ತಲ್ವಾರ್ ತಿರುಗಿಸಿಕೊಂಡು ತಿರುಗಾಡುತ್ತಿದ್ದಾರೆ. ಹೀಗಾಗಿ ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಇಂದಿಲ್ಲಿ ಆಗ್ರಹಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಸರಕಾರ ಜಾಗಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಸರಕಾರದ ಅನುಮತಿ ಪಡೆಯಬೇಕು. ಆದರೆ, ಆರೆಸ್ಸೆಸ್‍ನವರು ಶಾಖೆಗಳನ್ನು ನಡೆಸುತ್ತಿದ್ದು, ನಾವೇಕೆ ಅನುಮತಿ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸುತ್ತಾರೆ. ಆರೆಸ್ಸೆಸ್ ನೋಂದಣಿಯಾಗದ ಸಂಘಟನೆಯಾಗಿದೆ’ ಎಂದು ಟೀಕಿಸಿದರು.
‘ಆರೆಸ್ಸೆಸ್ ನೋಂದಣಿಯಾಗಿದ್ದರೆ ತೋರಿಸಬೇಕು. ಫೆಲೆಸ್ತೀನ್ ಪರ ಪ್ರತಿಭಟನೆ ಮಾಡಿದರೆ ಪೊಲೀಸರು ಅವರನ್ನು ಬಂಧಿಸುತ್ತಾರೆ. ಹೀಗಿರುವಾಗ ಆರೆಸ್ಸೆಸ್ ಶಾಖೆಗಳನ್ನು ನಡೆಸಲು ಪೊಲೀಸರು ಏಕೆ ಅವಕಾಶ ನೀಡುತ್ತಾರೆ. ತಮಿಳುನಾಡಿನಲ್ಲಿ ಶಾಲೆ-ಕಾಲೇಜುಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಡೆಸಿದ್ದಕ್ಕೆ ಕಾನೂನಮು ಕ್ರಮ ಜರುಗಿಸಿದ್ದಾರೆ’ ಎಂದು ಹರಿಪ್ರಸಾದ್ ತಿಳಿಸಿದರು.
‘ಸರಕಾರಿ ಆಟದ ಮೈದಾನದಲ್ಲಿ ಏನೇ ಚಟುವಟಿಕೆ ಮಾಡಿದರೂ ಅನುಮತಿ ಪಡೆಯಬೇಕು. ಆದರೆ, ಆರೆಸ್ಸೆಸ್ ಹಲವು ವರ್ಷಗಳಿಂದ ರಾಜ್ಯ-ದೇಶದಲ್ಲಿ ಶಾಖೆಗಳನ್ನು ನಡೆಸುತ್ತಿದೆ. ಅಲ್ಲದೆ, ಪಥಸಂಚಲನದ ವೇಳೆ ಲಾಠಿ, ತಲ್ವಾರ್ ತಿರುಗಿಸಿಕೊಂಡು ಓಡಾಡ್ತಾರೆ. ಇಂತಹವರಿಗೆ ಏಕೆ ಅವಕಾಶ ನೀಡಬೇಕು’ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.







