ಪ್ರತಿಬಾರಿ ಆರೆಸ್ಸೆಸ್ ಬ್ಯಾನ್ ಆದಾಗಲೂ ಕ್ಷಮೆ ಕೋರಿ ಬ್ಯಾನ್ ತೆಗೆಸಿಕೊಂಡಿದ್ದಾರೆ : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಆರೆಸ್ಸೆಸ್‌ನವರು ದೊಣ್ಣೆ ಹಿಡಿದೇ ಪಥ ಸಂಚಲನ ಮಾಡುವುದು ಯಾಕೆ? ದೊಣ್ಣೆ ಇಲ್ಲದೇ ಪಥ ಸಂಚಲನ ಮಾಡಲಿ. ಆರೆಸ್ಸೆಸ್ ನೋಂದಣಿಯಾಗಿಲ್ಲ, ಪಥ ಸಂಚಲನದಲ್ಲಿ ಏನಾದರೂ ಸಮಸ್ಯೆಯಾದರೆ ಯಾರು ಹೊಣೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ಯಾವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದೆ. ಎಣ್ಣೆ ಹೊಡೆದು ಡಿಜೆ ಹಾಕಿಕೊಂಡು ಮಸೀದಿ ಚರ್ಚೆ ಮುಂದೆ ನೃತ್ಯ ಮಾಡುತ್ತಾರೆ. ಇದು ಯಾವ ಸಾಂಸ್ಕೃತಿಕ ಚಟುವಟಿಕೆ, ಇವರು ಮಾಡಲು ಹೊರಟಿರುವುದೇನು? ಇದು ಯಾವ ದೇಶಭಕ್ತಿ, ದೇಶಭಕ್ತಿ ಎಂದರೆ ಏನು? ತ್ರಿವರ್ಣ ಧ್ವಜ, ರಾಷ್ಟ್ರ ಗೀತೆ, ಸಂವಿಧಾನಕ್ಕೆ ಗೌರವ ಕೊಡಬೇಕು, ಆದರೆ ಇವರು ಗೌರವ ನೀಡಿಲ್ಲ ಎಂದು ಹೇಳಿದರು.
ಆರೆಸ್ಸೆಸ್‌ನವರು ದ್ವೇಷದ ಮೂಲಕ ಪರೋಕ್ಷವಾಗಿ ಅಧಿಕಾರಕ್ಕೆ ಬಂದಿದ್ದಾರೆ. ಪ್ರತಿಬಾರಿ ಆರೆಸ್ಸೆಸ್ ಬ್ಯಾನ್ ಆದಾಗಲೂ ಕ್ಷಮೆ ಕೋರಿ ಬ್ಯಾನ್ ತೆಗೆಸಿಕೊಂಡಿದ್ದಾರೆ. ಆರೆಸ್ಸೆಸ್ ನೋಂದಣಿಯಾಗಿಲ್ಲ, ಅವರಿಗೆ ಹಣ ಎಲ್ಲಿಂದ ಬಂತು? ಗುರುದಕ್ಷಣೆ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಪಡೆಯುತ್ತಿದ್ದಾರೆ. ನೂರು ಕೋಟಿ ಮೌಲ್ಯದ ಆರೆಸ್ಸೆಸ್ ಕಚೇರಿ ನಿರ್ಮಿಸಿದ್ದಾರೆ. ಇದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದ್ದಾರೆ.
ಸರ್ದಾರ್ ಪಟೇಲ್ ಆರೆಸ್ಸೆಸ್ ನಿಷೇಧ ಮಾಡಿದ್ದರು, ಈ ಸಂದರ್ಭದಲ್ಲಿ ಕ್ಷಮಾಪಣೆ ಕೋರಿದ್ದರು. ನಾವು ರಾಜಕೀಯವಾಗಿ ಗುರುತಿಸಿಕೊಳ್ಳುವುದಿಲ್ಲ, ಇದು ಸಾಂಸ್ಕೃತಿಕ ಸಂಘಟನೆ ಎಂದಿದ್ದರು. ಖುದ್ದು ಆರೆಸ್ಸೆಸ್ ರಾಜಕೀಯದಲ್ಲಿ ನಾವು ಎಲ್ಲೂ ಇಲ್ಲ ಎಂದು ಹೇಳುತ್ತೆ, ಆದರೆ ಬಿಜೆಪಿ ನಾಯಕರು ನಾವು ಆರೆಸ್ಸೆಸ್ ಎನ್ನುತ್ತಾರೆ. ತಾಲಿಬಾನ್ ನೇರವಾಗಿ ಅಧಿಕಾರ ಹಿಡಿದರೆ, ಆರೆಸ್ಸೆಸ್ ಪರೋಕ್ಷವಾಗಿ ಅಧಿಕಾರ ನಿಯಂತ್ರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರಿ ಪ್ರದೇಶಗಳಲ್ಲಿ ಅವಕಾಶ ನೀಡಬಾರದು ಎಂದು ಪ್ರಿಯಾಂಕ್ ಖರ್ಗೆ ಸರಿಯಾಗಿ ಹೇಳಿದ್ದಾರೆ. ಗಾಂಧಿ ಕೊಂದ ಗೂಡ್ಸೆಯನ್ನು ಮೊದಲ ಭಯೋತ್ಪಾದಕ ಎಂದು ಆರೆಸ್ಸೆಸ್ ಘೋಷಿಸಬೇಕು. ಆರೆಸ್ಸೆಸ್ ಪಥ ಸಂಚಲನ ಮಾಡುವುದಾದರೆ ಪಾಕ್-ಚೀನಾ ಗಡಿಯಲ್ಲಿ ಮಾಡಲಿ, ಈ ದೇಶದಲ್ಲಿ ಕಾನೂನು ಸುವ್ಯವಸ್ಥೆ ಇದೆ. ಅದನ್ನು ಕೆಡಿಸಲು ಪ್ರಯತ್ನ ಮಾಡುತ್ತಾರೆ, ಅದಕ್ಕೆ ಪಥ ಸಂಚಲನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದು ಅವರು ಹೇಳಿದರು.







