ಆರೆಸ್ಸೆಸ್ ಲಾಠಿ ಹಿಂಸೆಯ ಸೂಚಕ, ಗಾಂಧಿಯ ಊರುಗೋಲು ಪರಿಶ್ರಮ ಮತ್ತು ಛಲದ ಸಂಕೇತ : ಬಿ.ಕೆ.ಹರಿಪ್ರಸಾದ್

ಬಿ.ಕೆ.ಹರಿಪ್ರಸಾದ್
ಬೆಂಗಳೂರು : ʼಸತ್ಯ, ಅಹಿಂಸೆ, ಸಹಿಷ್ಣುತೆಯನ್ನೇ ಉಸಿರಾಡಿದ ಮಹಾತ್ಮಾ ಗಾಂಧಿ ಅವರನ್ನು ಕೊಂದ ಸಂಸ್ಕೃತಿಯವರ ಮಾನಸಿಕ ಕ್ರೌರ್ಯ ಮುಂದುವರೆಯುತ್ತಲೇ ಇದೆ. ಗಾಂಧಿಯನ್ನು ಅವಮಾನಿಸುವ, ಹೀಯಾಳಿಸುವ ಹೀನ ಮನಸ್ಥಿಯನ್ನೇ ಇಂದು ಪತ್ರಿಕೆಗಳ ಮೂಲಕ ಜಾಹೀರಾತುಗಳಲ್ಲಿ ಬಿಜೆಪಿ ಪ್ರಕಟಿಸಿದೆʼ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಅವರು, ʼಕ್ರೌರ್ಯ, ಕೊಲೆ, ಹಿಂಸೆ, ದೌರ್ಜನ್ಯ, ಗೂಂಡಾಗಿರಿಯನ್ನೇ ಬದುಕನ್ನಾಗಿಸಿಕೊಂಡಿರುವ ಸಂಘ ಪರಿವಾರ ಹಾಗೂ ಬಿಜೆಪಿ ಪಕ್ಷ ಗಾಂಧಿ ಅವರ ಊರುಗೋಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಡೆಯಲು ಹೋಗುವಂತೆ ಚಿತ್ರಿಸುವ ಜಾಹೀರಾತು ನೀಡುವ ಮೂಲಕ ಗಾಂಧಿಯವರ ಅಹಿಂಸಾ ತತ್ವವನ್ನೇ ಅವಮಾನಿಸಿದೆ ಎಂದು ಹೇಳಿದ್ದಾರೆ.
ಆರೆಸ್ಸೆಸ್ ಬಳಸುವ ಲಾಠಿ ಹಿಂಸೆಯ ಸೂಚಕ, ಗಾಂಧಿ ಬಳಸಿದ ಊರುಗೋಲು ಕೇವಲ ಆಸರೆಯಲ್ಲ, ಬದಲಾಗಿ ಬಲ, ಪರಿಶ್ರಮ ಮತ್ತು ಛಲದ ಸಂಕೇತವಾಗಿತ್ತು. ಗಾಂಧಿಯವರ ತತ್ವಾದರ್ಶಗಳ ಮೇಲೆ ಬಿಜೆಪಿ ಮತ್ತು ಸಂಘಪರಿವಾರ ನಿರಂತರ ದಾಳಿ ಮಾಡುತ್ತಲೇ ಇದೆ ಎಂದಿದ್ದಾರೆ.
ದೇಶದ ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಪ್ರಕಟಿಸಿರುವ ಬಹುತೇಕ ಮಾಧ್ಯಮಗಳು ಜಾಹೀರಾತನ್ನು ಪ್ರಕಟಿಸದೆ ಪತ್ರಿಕಾಧರ್ಮ ಪಾಲಿಸಬೇಕಿತ್ತು. ರಾಜ್ಯದ ಪತ್ರಿಕೆಗಳು ಕೂಡ "ಗೋದಿ ಮಾಧ್ಯಮದ" ಭಾಗವಾಗಬಾರದು. ಯಾಕಂದರೆ "ಬಾಪೂ" ಈ ದೇಶ ಕಂಡ ಅತ್ಯಂತ ಆದರ್ಶ ಪತ್ರಕರ್ತರೂ ಆಗಿದ್ದರು ಎಂಬ ಇತಿಹಾಸವನ್ನು ಮರೆಯಬಾರದು ಎಂದು ಉಲ್ಲೇಖಿಸಿದ್ದಾರೆ.







