ಅಧಿಕಾರ, ಸಚಿವ ಸ್ಥಾನ ಬೇಕು ಎನ್ನುವವರು ಡಿಕೆಶಿ ಜತೆಗೆ ಹೋಗಿ, ಪಕ್ಷ ಬಲಪಡಿಸಬೇಕೆನ್ನುವವರು ನನ್ನೊಂದಿಗೆ ಬನ್ನಿ : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ‘ಅಧಿಕಾರ, ಸಚಿವ ಸ್ಥಾನಮಾನ ಬೇಕೆನ್ನುವವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಹೋಗಿ. ಕಾಂಗ್ರೆಸ್ ಪಕ್ಷ, ಹೋರಾಟ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಕೈಬಲಪಡಿಸಬೇಕು ಎನ್ನುವವರು ನನ್ನ ಜತೆಗೆ ಬನ್ನಿ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ(ಕೆಪಿಸಿಸಿ) ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ತಿಳಿಸಿದ್ದಾರೆ.
ಗುರುವಾರ ಕೆಪಿಸಿಸಿ ನೂತನ ಅಧ್ಯಕ್ಷರಾದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್ ಅವರು, ಸೋನಿಯಾ ಗಾಂಧಿಯವರ ಆಶೀರ್ವಾದ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ವರಿಷ್ಠರು ನನ್ನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಪಕ್ಷದಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಯಾವತ್ತೂ ಸಚಿವ ಸ್ಥಾನ ಬೇಕೆಂದು ಕೇಳಿಲ್ಲ. ನಾನು ಅಧಿಕಾರಕ್ಕಾಗಿ ಇರುವವನಲ್ಲ, ನಾನು ಕಾಂಗ್ರೆಸ್ ಪಕ್ಷದ ಸಿಪಾಯಿ ಎಂದು ಹೇಳಿದರು.
ಈ ದೇಶ ಕವಲು ದಾರಿಯಲ್ಲಿದೆ. ನಾನು ಹಿಂದುಳಿದ ವರ್ಗ, ಮುಂದುವರಿದ ವರ್ಗಕ್ಕೆ ಸೇರಿದವನು ಎನ್ನುವುದು ಮುಖ್ಯವಲ್ಲ. ನಾನು ಮುಂದುವರಿದವರಿಗಿಂತ ಮುಂದುವರಿದವನು. 2028ಕ್ಕೆ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವುದು ಕೇವಲ ವಾಟ್ಸ್ ಆ್ಯಪ್ ವಿಶ್ವವಿದ್ಯಾನಿಲಯದ ಅಪಪ್ರಚಾರ. ನನಗೆ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದ್ದು, ಹಿರಿಯರ ಆದರ್ಶ ಪಾಲಿಸಿಕೊಂಡು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಹರಿಪ್ರಸಾದ್ ತಿಳಿಸಿದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್), ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಹೋರಾಡುವ ಹೊಣೆ ನಮ್ಮ ಮೇಲಿದೆ. ಅಧಿಕಾರ ನನಗೆ ಮುಖ್ಯವಲ್ಲ. ನಾವು ಬೀದಿಗಿಳಿದು ಹೋರಾಟ ಮಾಡಬೇಕು. ಗುಜರಾತ್ ಮಾದರಿ ನಮಗೆ ಬೇಕಿಲ್ಲ, ಕರ್ನಾಟಕ ಮಾದರಿಯ ಬಗ್ಗೆ ನಮಗೆ ಹೆಮ್ಮೆ ಇದೆ. ಇದರಲ್ಲಿ ಯಾವುದೇ ಬಣ್ಣ ಇಲ್ಲ. ಸರಕಾರ ಮತ್ತು ಪಕ್ಷ ಸಮನ್ವಯತೆಯಿಂದ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಹರಿಪ್ರಸಾದ್ ಹೇಳಿದರು.






