ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ಗೆ ಲೀಗಲ್ ನೋಟಿಸ್; ಕಾರಣವೇನು?

ಬಿ.ಕೆ.ಹರಿಪ್ರಸಾದ್
ಬೆಂಗಳೂರು : ಪಾಕಿಸ್ತಾನದ ಅಧಿಕಾರಿಗಳ ಜೊತೆ ಬಿಜೆಪಿ ರಾಷ್ಟ್ರೀಯ ನಾಯಕ ರಾಮ್ ಮಾಧವ್ ಗೌಪ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ಗೆ ಬಿಎನ್ಎಸ್ ಸೆಕ್ಷನ್ 356ರ ಅಡಿಯಲ್ಲಿ ಲೀಗಲ್ ನೋಟಿಸ್ ನೀಡಲಾಗಿದೆ.
ರಾಮ್ ಮಾಧವ್ ಅವರ ಕಾನೂನು ತಂಡವು ಈ ಲೀಗಲ್ ನೋಟಿಸ್ ನೀಡಿದೆ.
ರಾಮ್ ಮಾಧವ್ ಹೆಸರಿಗೆ ಕಳಂಕ ತರಲು ಪ್ರಯತ್ನಿಸಿರುವುದಲ್ಲದೆ, ಅವರ ವ್ಯಕ್ತಿತ್ವ ಹಾಗೂ ಖ್ಯಾತಿಯನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಲಾಗಿದೆ ಎಂದು ನೋಟಿಸ್ ನಲ್ಲಿ ಆರೋಪಿಸಲಾಗಿದ್ದು, ಹರಿಪ್ರಸಾದ್ ಅವರು ರಾಮ್ ಮಾಧವ್ ಬಳಿ ಕ್ಷಮೆಯಾಚಿಸಬೇಕೆಂದು ಉಲ್ಲೇಖಿಸಲಾಗಿದೆ.
ಬಿ.ಕೆ.ಹರಿಪ್ರಸಾದ್ ಹೇಳಿಕೆ ಏನು?: ರಾಮ್ ಮಾಧವ್ ಕೊಲಂಬೋ ಹಾಗೂ ಲಂಡನ್ನಲ್ಲಿ ಪಾಕಿಸ್ತಾನದ ಅಧಿಕಾರಿಗಳ ಜೊತೆ ನಾಲ್ಕು ಸಭೆಗಳನ್ನು ಮಾಡಿದ್ದಾರೆ. ಐಎಸ್ಐನ ಮಾಜಿ ಮೇಜರ್ ಜನರಲ್ ಜೊತೆಯೂ ರಹಸ್ಯ ಸಭೆ ನಡೆಸಿದ್ದು, ಅಲ್ಲಿ ಏನು ಚರ್ಚೆ ನಡೆಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದರು.
ರಹಸ್ಯ ಸಭೆ ನಡೆಸಲು ನಿಮಗೆ ಯಾರು ಅಧಿಕಾರ ಕೊಟ್ಟರು? ಬೇರೆ ದೇಶದ ಅಧಿಕಾರಿಗಳೊಂದಿಗೆ ವಿದೇಶಾಂಗ ಸಚಿವಾಲಯ ಸಭೆ ಮಾಡಬೇಕು. ಆದರೆ, ರಾಮ್ ಮಾಧವ್ ವಿದೇಶಾಂಗ ಸಚಿವರಲ್ಲ, ಶಾಸಕ, ಸಂಸದನೂ ಅಲ್ಲ. ಕೇವಲ ಆರೆಸ್ಸೆಸ್ನ ಪ್ರಚಾಕರ. ಹೀಗಿರುವಾಗ ಇವರಿಗೆ ವಿದೇಶದಲ್ಲಿ ಅಧಿಕಾರಿಗಳ ಸಭೆ ಮಾಡೋಕೆ ಅವಕಾಶ ಕೊಟ್ಟವರು ಯಾರು ಎಂಬುದನ್ನು ಬಹಿರಂಗಪಡಿಸಲಿ ಎಂದು ಹರಿಪ್ರಸಾದ್ ಹೇಳಿದ್ದರು.






