ಸಂಪುಟ ವಿಸ್ತರಣೆ ಕುರಿತು ಚರ್ಚೆಗಳು ಪೂರ್ಣ : ಬಿ.ಕೆ.ಹರಿಪ್ರಸಾದ್

ಹೊಸದಿಲ್ಲಿ : ರಾಜ್ಯ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ನಾಯಕರು ಎಲ್ಲ ಚರ್ಚೆಗಳನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ಜೊತೆ ಹೈಕಮಾಂಡ್ ನಾಯಕರು ಚರ್ಚೆಗಳನ್ನು ನಡೆಸಿ, ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ನಾವು ಪರೀಕ್ಷೆ ಬರೆದು ಆಗಿದೆ. ಇನ್ನೂ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಮುಖ್ಯಮಂತ್ರಿಯವರು ಶುಭ ಗಳಿಗೆ ನೋಡಿ ಸಂಪುಟ ವಿಸ್ತರಣೆಗಾಗಿ ಮುಹೂರ್ತ ನಿಗದಿ ಮಾಡುತ್ತಾರೆ ಎಂದು ಹರಿಪ್ರಸಾದ್ ತಿಳಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಯಶ್‍ಪಾಲ್ ಸುವರ್ಣ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, ಮಹಾತ್ಮ ಗಾಂಧಿಯನ್ನು ಕೊಲೆ ಮಾಡಿದ ಗೋಡ್ಸೆ ಸಂತತಿಯ ಜನ ಇವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾರಿಯಲ್ಲಿ ಹೊಗುವವರೆಲ್ಲ ರಾಹುಲ್ ಗಾಂಧಿಯನ್ನು ಮುಗಿಸುವುದಾಗಿ ಹೇಳುತ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಯಿತು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ ನೆಹರು ಅವರ ವಿರುದ್ಧವೂ ಷಡ್ಯಂತ್ರಗಳನ್ನು ನಡೆಸಲಾಗಿತ್ತು ಎಂದು ಅವರು ಹೇಳಿದರು.
ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಯಶ್‍ಪಾಲ್ ಸುವರ್ಣ ವಿರುದ್ಧ ಕೋವಿಡ್ ಸಂದರ್ಭದಲ್ಲಿ 31 ಮಹಿಳೆಯರಿಗೆ ತಲಾ 20 ಸಾವಿರ ರೂ.ಸಾಲ ನೀಡುವುದಾಗಿ ಹೇಳಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ತಲಾ 2 ಲಕ್ಷ ರೂ. ಸಾಲ ನೀಡಿರುವುದಾಗಿ ತಿಳಿಸಲಾಗಿದೆ ಎಂದು ಹರಿಪ್ರಸಾದ್ ತಿಳಿಸಿದರು.
ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್‍ನಲ್ಲಿ ಸುಮಾರು 178 ಕೋಟಿ ರೂ.ಗಳ ಅಕ್ರಮ ನಡೆದಿರುವುದು ಲೆಕ್ಕಪರಿಶೋಧನಾ ವರದಿಯಲ್ಲಿ ಬಹಿರಂಗವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತನಿಖೆಗೆ ಆದೇಶಿಸಲಾಗಿತ್ತು. ಆದರೆ, ಕ್ಷಿಪ್ರಗತಿಯಲ್ಲಿ ತನಿಖೆ ನಡೆಯುತ್ತಿಲ್ಲ ಎಂದು ಅವರು ಹೇಳಿದರು.
ಇದೇ ಬ್ಯಾಂಕಿನ ಮಲ್ಪೆ ಬೀಚ್ ಶಾಖೆಯಲ್ಲಿ ಸಾಲ ವಸೂಲಾತಿ ಕೆಲಸ ಮಾಡುತ್ತಿದ್ದ ಸುಬ್ಬಣ್ಣ ಎಂಬ ದಲಿತ ನೌಕರ ಮೃತಪಟ್ಟಿದ್ದಾನೆ. ಅದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಸಂಶಯವನ್ನು ವ್ಯಕ್ತವಾಗಿದೆ. ಆದುದರಿಂದ, ಬ್ಯಾಂಕ್‍ನಲ್ಲಿ ನಡೆದಿರುವ 178 ಕೋಟಿ ರೂ.ಗಳ ಅಕ್ರಮ ಹಾಗೂ ಸುಬ್ಬಣ್ಣ ಸಾವಿಗೆ ಸಂಬಂಧಿಸಿದಂತೆ ಎಸ್‍ಐಟಿ ರಚನೆ ಮಾಡಿ ತನಿಖೆ ನಡೆಸಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದರು.






