ಸಚಿವ ಸಂಪುಟ ವಿಸ್ತರಣೆ | ಶೋಷಿತ ಸಮುದಾಯಗಳಿಗೆ ದೊಡ್ಡ ಪ್ರಮಾಣದಲ್ಲಿ ಅವಕಾಶ ನೀಡಲಾಗಿದೆ : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಸಂಪುಟ ವಿಸ್ತರಣೆಯಿಂದಾಗಿ ನಮ್ಮ ಪಕ್ಷದಲ್ಲಿ ಯಾರಿಗೂ ಅಸಮಾಧಾನ ಆಗಿಲ್ಲ. ಅದೇನಿದ್ದರೂ ಬಿಜೆಪಿಯವರಿಗೆ. ಶಾಸಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಶೋಷಿತ ಸಮುದಾಯಗಳಿಗೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅವಕಾಶ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಇಂದಿರಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತೀರ್ಮಾನದಲ್ಲಿ ಕೆ.ಸಿ.ವೇಣುಗೋಪಾಲ್ ಹಾಗೂ ಸುರ್ಜೆವಾಲ ಇದ್ದರು. ನಮ್ಮ ಪಕ್ಷದಲ್ಲಿ ನಾಯಕತ್ವದ ಭಂಡಾರವೇ ಇದೆ. ಬಿಜೆಪಿಯವರಂತೆ ನಾಯಕತ್ವದ ಕೊರತೆ ಇಲ್ಲ ಎಂದು ತಿರುಗೇಟು ನೀಡಿದರು.
ನಮ್ಮಲ್ಲಿ ಬಹುತೇಕರು ನಾಲ್ಕರಿಂದ ಐದು ಬಾರಿ ಶಾಸಕರಾದವರು ಇದ್ದಾರೆ. 140 ಜನರ ಪೈಕಿ ಮೊದಲ ಬಾರಿ ಗೆದ್ದವರು 48 ಜನ, ಉಳಿದವರೆಲ್ಲರೂ ಹಲವು ಬಾರಿ ಗೆದ್ದಿರುವವರೆ. ಪೌರಕಾರ್ಮಿಕ ದಂಪತಿಗಳ ಮಗನಿಗೆ ಸಚಿವ ಸ್ಥಾನ ನೀಡುವ ಮೂಲಕ ನಾವು ಹೊಸ ಇತಿಹಾಸ ಬರೆದಿದ್ದೇವೆ. ಇಂತಹ ಇತಿಹಾಸ ಬಿಜೆಪಿಯವರಿಂದ ಸಾಧ್ಯವೇ? ಬೊಮ್ಮಾಯಿ ಸರಕಾರದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಇರಲಿಲ್ಲ ಎಂದು ಹರಿಪ್ರಸಾದ್ ಹೇಳಿದರು.
ನಾವು ಬಹುತೇಕ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಕ್ರೈಸ್ತರು, ಒಕ್ಕಲಿಗರು, ಲಿಂಗಾಯತರಿಗೆ ಅವಕಾಶ ಕಲ್ಪಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರನ್ನು ಒಳಗೊಂಡ ಸರಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಸರಕಾರ. ಕೆಲವು ಸಂದರ್ಭದಲ್ಲಿ ಬೇಸರ ಆಗುತ್ತದೆ. ನಾವು ಎಲ್ಲರನ್ನು ಒಪ್ಪಿಸುತ್ತೇವೆ ಎಂದು ಅವರು ತಿಳಿಸಿದರು.
ನೀವು ಮನವೊಲಿಸುತ್ತೇವೆ ಎನ್ನುತ್ತೀರಿ, ಮುಖ್ಯಮಂತ್ರಿ ರಾಜಿನಾಮೆ ಅಂಗೀಕರಿಸುತ್ತೇವೆ ಎನ್ನುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ಮುಖ್ಯಮಂತ್ರಿ ಸರಕಾರದಲ್ಲಿರುವವರು. ಅವರ ಸರಕಾರದಲ್ಲಿರುವವರು ರಾಜಿನಾಮೆ ಕೊಟ್ಟರೆ ರಾಜಿನಾಮೆ ಅಂಗೀಕರಿಸುತ್ತಾರೆ. ಪಕ್ಷದಲ್ಲಿರುವವರು ನನ್ನ ಬಳಿ ರಾಜಿನಾಮೆ ತೆಗೆದುಕೊಂಡು ಬಂದರೆ ನಾನು ಮಾತನಾಡಿ ಮನವೊಲಿಸುತ್ತೇನೆ ಎಂದರು.
ಬ್ರಾಹ್ಮಣ ಸಮುದಾಯಕ್ಕೆ ಮೊದಲ ಬಾರಿಗೆ ಅವಕಾಶ ಸಿಕ್ಕಿಲ್ಲ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರನ್ನು ಸಮಾಧಾನಪಡಿಸಲು ಆಗುವುದಿಲ್ಲ. ಪ್ರಾತಿನಿಧ್ಯ ವಂಚಿತ ಸಮುದಾಯಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಒಂದು ಸಮುದಾಯಕ್ಕೆ ಸಿಕ್ಕಿಲ್ಲ ಎಂಬುದಲ್ಲ. ಬಹಳಷ್ಟು ಸಮುದಾಯಗಳಿವೆ. ಯಾವ ಸಮುದಾಯಗಳಿಗೆ ಅವಕಾಶ ಸಿಕ್ಕಿಲ್ಲ ಅವರನ್ನು ಜೋಡಿಸುವ ಕೆಲಸ ಮಾಡಿದ್ದೇವೆ. ಅವಕಾಶ ಸಿಗದೇ ಇರುವ ಅನೇಕ ಸಮುದಾಯಗಳಿವೆ ಎಂದು ತಿಳಿಸಿದರು.
ಎಂ.ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಬೆಂಬಲಿಗರ ಪ್ರತಿಭಟನೆ ಹೆಚ್ಚಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ನಾನು ಅವರೊಂದಿಗೆ ಮಾತನಾಡಿದ್ದು, ಸಮಾಧಾನದಿಂದ ಇರಲು ಮನವಿ ಮಾಡಿದ್ದೇನೆ. ಪುನಃ ಅವರೊಂದಿಗೆ ಚರ್ಚಿಸುವೆ. ಇಬ್ಬರು ಗೆದ್ದಿರುವಾಗ ಅವಕಾಶ ಸಿಗದಿದ್ದಾಗ ಬೇಸರ ಸಹಜ. ಪ್ರಿಯಾ ಕೃಷ್ಣ ಯುವಕರು ಅವರ ಭವಿಷ್ಯ ಉಜ್ವಲವಾಗಿದೆ ಎಂದರು.
ತನ್ವಿರ್ ಸೇಠ್ ಅವರಿಗೆ ಅನ್ಯಾಯ ಆಗಿದೆ ಎಂದು ಒಪ್ಪುವೆ. ಆದರೆ ಅವರ ಸಮುದಾಯಕ್ಕೆ ಈಗಿನಷ್ಟು ಪ್ರಾತಿನಿಧ್ಯ ಬೇರೆ ಯಾವ ಸಂದರ್ಭದಲ್ಲೂ ಸಿಕ್ಕಿರಲಿಲ್ಲ. ಇನ್ನೂ ಗಾಯತ್ರಿ ಶಾಂತೇಗೌಡರಿಗೆ ಕೊನೆ ಕ್ಷಣದಲ್ಲಿ ಅವಕಾಶ ತಪ್ಪಿದ ಕುರಿತು ನಾವು ಚರ್ಚೆ ಮಾಡುವ ವಿಚಾರವಲ್ಲ. ಕಾಂಗ್ರೆಸ್ ಪಕ್ಷದ ಕೆಲವು ತೀರ್ಮಾನ ಆಗುತ್ತಿರುತ್ತದೆ. ಎಲ್ಲರಿಗೂ ಅವಕಾಶ ನೀಡಲಾಗುವುದು ಎಂದರು.
ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಹಿಳೆಯರಿಗೆ ಅವಕಾಶ ನೀಡಿಲ್ಲ, ಅವರಿಗೆ ಅವಕಾಶ ನೀಡಬೇಕು. ನಮ್ಮ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದರು.






