ʼಎಸ್‍ಐಆರ್ʼ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಶಾಸಕರ ಸಭೆ
ಅರ್ಹ ಮತದಾರರ ಹೆಸರು ಕೈ ಬಿಟ್ಟು ಹೋಗಬಾರದು : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಭಾರತ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಕುರಿತು 2023ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಸಭೆ ಕರೆದು ಅವರ ಜೊತೆ ಚರ್ಚೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆಹರಿಪ್ರಸಾದ್ ತಿಳಿಸಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಪರಾಜಿತ ಅಭ್ಯರ್ಥಿಗಳು ಹಾಗೂ ಮಾಜಿ ಶಾಸಕರ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಎಸ್‍ಐಆರ್ ಗೆ ಸಂಬಂಧಿಸಿದಂತೆ ಅವರ ಕ್ಷೇತ್ರದಲ್ಲಿನ ವಿಚಾರಗಳ ಬಗ್ಗೆ ಸವಿಸ್ತಾರವಾದ ಸಂಗತಿಗಳನ್ನು ಹಂಚಿಕೊಳ್ಳಲಾಯಿತು. ಜೊತೆಗೆ ಕಲ್ಯಾಣ ಕರ್ನಾಟಕದಲ್ಲಿ ಬರ ಪರಿಹಾರಕ್ಕೆ ಏನು ಮಾಡಬೇಕೆಂದು ಚರ್ಚೆ ನಡೆಸಲಾಗಿದೆ. ಇದರ ಮೂಲಕ ಸರಕಾರದ ಗಮನ ಸೆಳೆಯಲು ನಾವು ಸಭೆ ನಡೆಸಿದ್ದೇವೆ ಎಂದು ಅವರು ಹೇಳಿದರು.
ಅನೇಕ ಕಡೆ ಬಿಎಲ್‍ಓಗಳು ಸಹಕಾರ ಕೊಡುತ್ತಿಲ್ಲ. ಆದರೆ ಹೆಚ್ಚಿನ ಬಿಎಲ್‍ಓ ಗಳು ಸಹಕಾರ ನೀಡಿದ್ದಾರೆ. ದುರ್ಬಲ ವರ್ಗಕ್ಕೆ ಸೇರಿದ ಮತದಾರರ ಹೆಸರುಗಳು ಅತೀ ಹೆಚ್ಚು ಪ್ರಮಾಣದಲ್ಲಿ ಕೈ ಬಿಟ್ಟು ಹೋಗಿರುವುದು ಆತಂಕಕಾರಿ ಸಂಗತಿ. ಆಯಾ ಜಿಲ್ಲಾ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಇಷ್ಟು ದಿನ ನಡೆದ ಎಸ್‍ಐಆರ್ ಪ್ರಕ್ರಿಯೆ ಕುರಿತು ನಿಮಗೆ ತೃಪ್ತಿ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ಅರ್ಹ ಮತದಾರರ ಹೆಸರು ಮತಪಟ್ಟಿಯಿಂದ ಕೈ ಬಿಟ್ಟು ಹೋಗಬಾರದು ಎಂಬುದೆ ನಮ್ಮ ಕಾಳಜಿ ಎಂದು ಹೇಳಿದರು.
ನಮ್ಮ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿಯೂ ನಾವು ಮತದಾರರ ಹಕ್ಕು ರಕ್ಷಿಸಲು ಅಭಿಯಾನ ಮಾಡುತ್ತಿದ್ದೇವೆ. ನಾವು ಎಸ್‍ಐಆರ್ ವಿರುದ್ಧವಲ್ಲ. ಸಕ್ರಮವಾಗಿ ಜನರ ಕೆಲಸ ಮಾಡುವವರ ಪರ. ಮತದಾರರ ಪಟ್ಟಿ ಮೇಲೆ ಪ್ರಜಾಪ್ರಭುತ್ವ ನಿಂತಿದೆ. ಇದನ್ನು ಉಳಿಸುವುದೇ ನಮ್ಮ ಹೋರಾಟ ಎಂದು ಹರಿಪ್ರಸಾದ್ ತಿಳಿಸಿದರು.
ಬಿಜೆಪಿ ಪಕ್ಷದ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಹಮ್ಮಿಕೊಂಡಿರುವ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರಾದರೂ ಇದ್ದರೆ ಅದು ಯಡಿಯೂರಪ್ಪನವರು. ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋದವರು ಇಂದು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವುದು ಹಾಸ್ಯಸ್ಪದ ಎಂದು ತಿರುಗೇಟು ನೀಡಿದರು.
ಆಪರೇಷನ್ ಕಮಲ ಮೂಲಕ ಸರಕಾರ ತಂದು ಅಧಿಕಾರಕ್ಕೆ ಬಂದವರಿಂದ ನಾವು ಪಾಠ ಕಲಿಯಬೇಕಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಒಟ್ಟಿಗೆ ಇದ್ದಷ್ಟು ಬಹಳ ಒಳ್ಳೆಯದು. ಹಲವಾರು ಗುಂಪುಗಳು ಜೀವಂತವಾಗಿರಬೇಕು. ಸಾಮ್ರಾಟ್ ಆಶೋಕ ಹಾಗೂ ಬೇಬಿ ಯಡಿಯೂರಪ್ಪ ಮೂರು ವರ್ಷಗಳಲ್ಲಿ ಏನೂ ಮಾಡಲು ಆಗಿಲ್ಲ. ಈಗ ಏನೋ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ, ಮಾಜಿ ಮೇಯರ್ ರಾಮಚಂದ್ರಪ್ಪ ಉಪಸ್ಥಿತರಿದ್ದರು.
ಎಸ್‍ಐಆರ್ ಪ್ರಕ್ರಿಯೆ ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣಾ ತಯಾರಿ ಹಾಗೂ ಪಕ್ಷ ಸಂಘಟನೆ ಕುರಿತು ಸಭೆಯಲ್ಲಿ ಸುಧೀರ್ಘವಾಗಿ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಮಾಜಿ ಸಚಿವರು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳು ಭಾಗವಹಿಸಿದ್ದರು.






