ಉಮರ್ ಖಾಲಿದ್‍ರನ್ನು ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ದೇಶದ ಜನರ ಪರವಾಗಿ ಮಾತನಾಡಿದ ವಿದ್ಯಾವಂತ, ಜನಪರ ಚಳವಳಿಗಾರ ಉಮರ್ ಖಾಲಿದ್‍ರನ್ನು ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಗುರುವಾರ ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಉಮರ್ ಖಾಲಿದ್ ಆರೆಸ್ಸೆಸ್‍ನಂತೆ ಪಾಕಿಸ್ತಾನದ ಜೊತೆ ಗುಪ್ತ ಚರ್ಚೆ ನಡೆಸಿಲ್ಲ. ಸಂಘಪರಿವಾರದವರಂತೆ ಐಎಸ್‍ಐ ಏಜೆಂಟ್‍ಗಳ ಜೊತೆ ಮಾತುಕತೆಯನ್ನೂ ನಡೆಸಿಲ್ಲ. ಕನಿಷ್ಟಪಕ್ಷ ಆಮಂತ್ರಣವೇ ಇಲ್ಲದೆ ಪಾಕ್ ಪ್ರಧಾನಿಯ ಕುಟುಂಬದ ಕಾರ್ಯಕ್ರಮಕ್ಕೆ ಹೋಗಿ ಬಿರಿಯಾನಿ ತಿಂದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರು ರಾಜಕೀಯವಾಗಿ ಉತ್ತರ ಕೊಡಬೇಕಾದ ಪ್ರಶ್ನೆಗಳಿಗೆ ‘ದೇಶದ್ರೋಹ’ ಎಂಬ ಪದವನ್ನು ಬಳಸುತ್ತಿದ್ದಾರೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರತಿಯೊಬ್ಬರನ್ನೂ ದೇಶದ್ರೋಹಿ ಎಂದು ಕರೆಯುವುದು ಪ್ರಜಾಪ್ರಭುತ್ವದ ಭಾಷೆಯಲ್ಲ ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.
ಉಮರ್ ಖಾಲಿದ್ ಅವರನ್ನು ನಾನು ರಾಷ್ಟ್ರವಾದಿ ಎಂದು ಕರೆದಿದ್ದೇನೆ. ಅದರಲ್ಲಿ ನನಗೆ ಯಾವುದೇ ಹಿಂಜರಿಕೆಯಿಲ್ಲ. ಯಾರೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ಕಾರಣಕ್ಕೆ ಅವರನ್ನು ನ್ಯಾಯಾಲಯದಲ್ಲಿ ಅಪರಾಧಿ ಎಂದು ಘೋಷಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವ ನ್ಯಾಯಾಲಯ ಖಾಲಿದ್‍ನನ್ನು ದೇಶದ್ರೋಹಿ ಎಂದಿದೆ? ಆರು ವರ್ಷಗಳ ಕಾಲ ವಿಚಾರಣೆ ನಡೆಸದೆ ಯಾಕೆ ಮೀನಾಮೇಷ ಎಣಿಸುತ್ತಿದೆ? ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಆರೋಪ ಮತ್ತು ಅಪರಾಧ ಸಾಬೀತಾಗಿರುವುದು ಒಂದೇ ಅಲ್ಲ. ಈ ಸರಳ ಕಾನೂನು ತತ್ವವನ್ನು ಬಿ.ವೈ.ವಿಜಯೇಂದ್ರ ಮತ್ತು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳದೆ ತಮ್ಮ ಅವಿವೇಕಿತನವನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಟೀಕಿಸಿದರು.
ದೇಶಪ್ರೇಮದ ಸರ್ಟಿಫಿಕೇಟ್ ನೀಡುವ ಅಧಿಕಾರವನ್ನು ಬಿಜೆಪಿಗೆ ಯಾರೂ ಕೊಟ್ಟಿಲ್ಲ. ದೇಶಪ್ರೇಮ ಎಂದರೆ ಬಿಜೆಪಿಯನ್ನು ಬೆಂಬಲಿಸುವುದಲ್ಲ. ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯದ ಪರ ನಿಲ್ಲುವುದು ದೇಶಪ್ರೇಮ. ಸ್ವತಂತ್ರ ಹೋರಾಟ, ಸಂವಿಧಾನ, ತ್ರಿವರ್ಣ ಧ್ವಜ, ರಾಷ್ಟ್ರಗೀತೆಯನ್ನು ವಿರೋಧ ಮಾಡಿದವರಿಂದ ದೇಶಪ್ರೇಮದ ಪಾಠ ಹೇಳಿಸಿಕೊಳ್ಳುವ ಅಗತ್ಯ ನಮಗೆ ಬಂದಿಲ್ಲ ಎಂದು ಹರಿಪ್ರಸಾದ್ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮನೆ ಮೂರು ಬಾಗಿಲು ಎಂದು ಹೇಳುವ @BYVijayendra ಮೊದಲು ತಮ್ಮ ಮನೆಯ ಬಾಗಿಲುಗಳನ್ನು ಎಣಿಸಿಕೊಳ್ಳಲಿ. ಕಾಂಗ್ರೆಸ್ ಮನೆಗೆ ಮೂರು ಬಾಗಿಲುಗಳಿವೆ ಎಂದು ಹೇಳುವ ಬಿಜೆಪಿಯ ಮನೆ ಈಗ ‘ನೂರು ಬಾಗಿಲು’ ಆಗಿದೆ. ಇಷ್ಟಕ್ಕೂ ಕಾಂಗ್ರೆಸ್ ಪಕ್ಷದ ಕಚೇರಿಯ ಬಾಗಿಲು, ಕಿಟಕಿಗಳನ್ನು ಎಣಿಸುತ್ತಾ ಕೂರಲು ವಿಜಯೇಂದ್ರ ಕೆಪಿಸಿಸಿಯ ವಾಚ್ ಮೆನ್…
— Hariprasad.B.K. (@HariprasadBK2) September 17, 2026
‘ವಿಜಯೇಂದ್ರ ಕೆಪಿಸಿಸಿಯ ವಾಚ್‍ಮೆನ್ ಆಗಿದ್ದಾರೆಯೇ?’: ‘ಕಾಂಗ್ರೆಸ್ ಪಕ್ಷದ ಮನೆ ಮೂರು ಬಾಗಿಲು’ ಎಂದು ಹೇಳುವ ಬಿ.ವೈ.ವಿಜಯೇಂದ್ರ ಮೊದಲು ತಮ್ಮ ಮನೆಯ ಬಾಗಿಲುಗಳನ್ನು ಎಣಿಸಿಕೊಳ್ಳಲಿ. ಕಾಂಗ್ರೆಸ್ ಮನೆಗೆ ಮೂರು ಬಾಗಿಲುಗಳಿವೆ ಎಂದು ಹೇಳುವ ಬಿಜೆಪಿಯ ಮನೆ ಈಗ ನೂರು ಬಾಗಿಲು ಆಗಿದೆ. ಇಷ್ಟಕ್ಕೂ ಕಾಂಗ್ರೆಸ್ ಪಕ್ಷದ ಕಚೇರಿಯ ಬಾಗಿಲು, ಕಿಟಕಿಗಳನ್ನು ಎಣಿಸುತ್ತಾ ಕೂರಲು ವಿಜಯೇಂದ್ರ ಕೆಪಿಸಿಸಿಯ ವಾಚ್ ಮೆನ್ ಆಗಿದ್ದಾರೆಯೇ?, ವಿಜಯೇಂದ್ರ ಕಾಂಗ್ರೆಸ್ ಪಕ್ಷದ ಮನೆಯ ಬಾಗಿಲು ಎಣಿಸುವುದನ್ನು ಬಿಟ್ಟು ಮೊದಲು ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಗಳಿಗೆ ಉತ್ತರಿಸಲಿ ಎಂದು ಹರಿಪ್ರಸಾದ್ ತಿರುಗೇಟು ಕೊಟ್ಟರು.






