ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಸಂದರ್ಭ ಬಿಜೆಪಿಗರು ಹಿಂದಿನಿಂದ ಬಂದು ಬಟ್ಟೆ ಹರಿದರು: ಬಿ.ಕೆ. ಹರಿಪ್ರಸಾದ್ ಆರೋಪ

ಬೆಂಗಳೂರು: ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಬಿಜೆಪಿಗರು ಹಿಂದಿನಿಂದ ಬಂದು ಬಟ್ಟೆ ಹರಿದರು. ಇದು ರಣಹೇಡಿಗಳು ಹಾಗೂ ಬ್ರಿಟೀಷರ ಬೂಟ್ ನೆಕ್ಕಿದವರ ಕೃತ್ಯ ಎಂದು ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್ ಟೀಕಿಸಿದ್ದಾರೆ.
ಗುರುವಾರ ರಾಜ್ಯ ವಿಧಾನಮಂಡಲದ ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲ ಭಾಷಣ ಮೊಟಕುಗೊಳಿಸಿದ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಸ್ವೇಚ್ಚಾಚಾರವಾಗಿ ನಡೆದುಕೊಳ್ಳವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಹಿಂದಿನಿಂದ ಬಂದು ನನ್ನ ಬಟ್ಟೆ ಹರಿದಿದ್ದಾರೆ ಬಿಜೆಪಿಗರು ಎಂದು ಬಿ.ಕೆ. ಹರಿಪ್ರಸಾದ್ ಆರೋಪಿದರು.
ಮುಂದಿನಿಂದ ಬರುವ ಶಕ್ತಿ ಇಲ್ಲ. ಹಿಂದಿನಿಂದ ಬಂದು ಹರಿದಿದ್ದಾರೆ. ರಣಹೇಡಿಗಳು ಹಾಗೂ ಬ್ರಿಟೀಷರ ಬೂಟ್ ನೆಕ್ಕಿದವರು. ಕರ್ನಾಟಕದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದೂ ಅವರು ಉಲ್ಲೇಖಿಸಿದರು.
ನ್ಯಾಯಾಂಗ ಮಧ್ಯಪ್ರವೇಶಿಸಲಿ:
‘ರಾಜ್ಯದ ಪಾಲಿಗೆ ಅತ್ಯುನ್ನತ ಹುದ್ದೆಯಲ್ಲಿರುವ ರಾಜ್ಯಪಾಲರು ಸಂವಿಧಾನಾತ್ಮಕ ಕರ್ತವ್ಯವನ್ನು ಮರೆತು ಯಾವುದೋ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ನ್ಯಾಯಾಂಗವು ಮಧ್ಯೆ ಪ್ರವೇಶಿಸಿ, ದಿಕ್ಕುತಪ್ಪಿರುವ ರಾಜ್ಯಪಾಲರಿಗೆ ಸಂವಿಧಾನದ ನಿಯಮಾವಳಿಗಳ ಬಗ್ಗೆ ತಿಳಿಸಿಕೊಡಬೇಕು’
-ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ







