ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಗೆ ಮತ್ತೊಮ್ಮೆ ಹತ್ಯಾ ರಾಜಕೀಯ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ: ಬಿ.ಕೆ. ಹರಿಪ್ರಸಾದ್ ಟೀಕೆ

ಬಿ.ಕೆ. ಹರಿಪ್ರಸಾದ್
ಬೆಂಗಳೂರು: ಜನ ಸಾಮಾನ್ಯರಿಂದ ಛೀಮಾರಿ ಹಾಕಿಸಿಕೊಂಡು ಜನಾಭಿಪ್ರಾಯ ಪಡೆಯುವಲ್ಲಿ ಸೋತ ಬಿಜೆಪಿ ಪಕ್ಷವು 2028ರ ಚುನಾವಣೆಗೆ ಈಗಿನಿಂದಲೇ ತನ್ನ ತಯಾರಿಯನ್ನು ಆರಂಭಿಸಿದೆ. ಇವರ ತಯಾರಿಯೂ ನಿಜಕ್ಕೂ ಜನಪರವಾಗಿ ಅಥವಾ ವಿಷಯಾಧಾರಿತ ಹೋರಾಟಗಳ ಮೂಲಕವಾಗಲಿ ಅಲ್ಲ. ಬದಲಿಗೆ ಇವರ ಹೋರಾಟವು 2018ರ ಮಾದರಿಯಲ್ಲೇ ಹತ್ಯೆಗಳನ್ನು ಬಳಸಿಕೊಂಡು ಅದರ ಮೇಲೆ ರಾಜಕೀಯ ಮಾಡುವುದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, 2018ರ ಶಿರಸಿಯ ಪರೇಶ್ ಮೇಸ್ತಾ ಅವರಿಂದ ಆರಂಭಗೊಂಡ ಬಿಜೆಪಿಗರ ಹತ್ಯಾ ರಾಜಕೀಯವು ಬಹುತೇಕ 8 ರಿಂದ 9 ತಿಂಗಳ ಕಾಲ ಅತ್ಯಂತ ಅಗ್ರೆಸಿವ್ ಆಗಿ ನಡೆಯಿತು. ನಂತರ ಶರತ್ ಮಡಿವಾಳ್, ದೀಪಕ್ ರಾವ್ ಸೇರಿದಂತೆ ಹಲವು ವ್ಯಕ್ತಿಗಳನ್ನು ತಮ್ಮ ಶವ ರಾಜಕೀಯಕ್ಕೆ ಬಳಸಿಕೊಂಡ ಬಿಜೆಪಿಗರು, ಕೊನೆಗೆ ಅವರ ಕುಟುಂಬಗಳತ್ತ ತಿರುಗಿಯೂ ನೋಡಲಿಲ್ಲ. ಇದನ್ನು ನಾನು ಹೇಳುತ್ತಿಲ್ಲ, ಬಿಜೆಪಿಗರ ಕುತಂತ್ರಗಳಿಂದ ನೊಂದ ಅವರ ಪೋಷಕರೇ ಹೇಳಿದ ಮಾತು ಎಂದು ಅವರು ಹೇಳಿದ್ದಾರೆ.
ಇನ್ನು ಈ ಸಾವುಗಳ ಕುರಿತು ಹೊರಬಿದ್ದ ಸಿಬಿಐ ತನಿಖೆಯ ವರದಿಗಳೂ ಸಹ ಇದು ಹತ್ಯೆಯಲ್ಲ ಎಂದು ಹೇಳಿರುವುದು ಬಿಜೆಪಿಗರ ಕೆಟ್ಟ ಪ್ರಯತ್ನಗಳಿಗೆ ಬೀಸಿದ ಛಾಟಿ ಆಗಿದೆ. 2018ರ ಸಂದರ್ಭದಲ್ಲಿ ಬೇರೆ ಬೇರೆ ಕಾರಣಕ್ಕೆ ನಡೆದ ಸಾವುಗಳನ್ನು ಬಿಜೆಪಿಗರು ಹಿಂದೂ ಹತ್ಯೆ ಎಂಬ ಶೀರ್ಷಿಕೆಯಡಿ ಬಿಂಬಿಸಲು ಆರಂಭಿಸಿದರು. 2013ರಿಂದ 2018 ರವರೆಗೆ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದು, ಜನಪ್ರಿಯತೆಯ ಉತ್ತುಂಗದಲ್ಲಿತ್ತು. ಅಂತಹ ಸ್ಥಿರ ಸರ್ಕಾರದ ಯಶಸ್ಸನ್ನು ಸಹಿಸಲಾಗದೇ ಮನುವಾದಿಗಳು ಮತ್ತು ಫ್ಯೂಡಲ್ ಶಕ್ತಿಗಳು ಒಂದಾಗಿ ಹತ್ಯಾ ರಾಜಕೀಯವನ್ನು ಅತಿ ಹೆಚ್ಚಾಗಿ ಮಾಡಿದವು ಎಂದು ಅವರು ಆರೋಪಿಸಿದ್ದಾರೆ.
ವಿಷಯಾಧಾರಿತ ಹೋರಾಟಗಳನ್ನು ಮಾಡುವ ಮನಸ್ಸಿದ್ದರೆ ಇಂತಹ ಕೆಟ್ಟ ಪ್ರಯತ್ನಗಳನ್ನು ಯಾವುದೇ ವಿಪಕ್ಷಗಳು ಮಾಡುವುದಿಲ್ಲ. ಆದರೆ ತಾನೊಂದು ವಿಪಕ್ಷ ಎಂಬ ಜವಾಬ್ದಾರಿಯನ್ನು ಮರೆತ ಬಿಜೆಪಿಗರು, ಅತ್ಯಂತ ಕೆಳ ಮಟ್ಟದ ರಾಜಕೀಯ ನಡೆಸಿದರು. ಆ ಸಂದರ್ಭದಲ್ಲಿ ಶವ ರಾಜಕೀಯ ಮಾಡಲು ಬಿಜೆಪಿಯ ಘಟಾನುಘಟಿ ನಾಯಕರೇ ಬೀದಿಗೆ ಇಳಿದಿದ್ದನ್ನು ನಾವು ಮರೆಯುವಂತಿಲ್ಲ ಎಂದು ಅವರು ಹೇಳಿದ್ದಾರೆ.
ಇದೀಗ ಮತ್ತೊಮ್ಮೆ ಜನರಿಂದ ಪೂರ್ಣ ಆಶೀರ್ವಾದ ಪಡೆದು ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿಗರಿಗೆ ಟೀಕಿಸಲು ಅಥವಾ ಹೋರಾಟ ನಡೆಸಲು ಯಾವುದೇ ರೀತಿಯ ವಿಷಯಗಳು ಇಲ್ಲದೇ ಇರುವ ಕಾರಣದಿಂದ ಮತ್ತೊಮ್ಮೆ ಹತ್ಯಾ ರಾಜಕೀಯ ನಡೆಸಬೇಕಾದ ಅನಿವಾರ್ಯತೆ ಅವರಿಗೆ ಸೃಷ್ಟಿ ಆಗಿದ್ದು, ಇದು ಪ್ರಜಾಪ್ರಭುತ್ವದ ನಾಡಾದ ಕರುನಾಡಿಗೆ ಮಾರಕವಾದ ಸಂಗತಿಯಾಗಿದೆ. ಜನರ ಸಮಸ್ಯೆಗಳಿಗೆ ದ್ವನಿಯಾಗಿ ಅಧಿಕಾರ ಪಡೆಯಬೇಕಾದ ಜನರು, ಈ ದಿನ ಗಲಭೆಗಳನ್ನು ಎಬ್ಬಿಸುವ ಮೂಲಕ ಅರಾಜಕತೆಯನ್ನು ಸೃಷ್ಟಿಸಲು ಹೊರಟಿದ್ದು, ಖಂಡನೀಯವಾದ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಸವಣ್ಣನವರ ಶಾಂತಿಯ ನಾಡಾದ ಕರ್ನಾಟಕವನ್ನು ಹತ್ಯಾ ರಾಜಕೀಯದ ನಾಡಾಗಿ ಬದಲಿಸಲು ಹೊರಟಿರುವ ಬಿಜೆಪಿಗರು, ಸಾರ್ವಜನಿಕ ಜೀವನದ ಮಹತ್ವವನ್ನು ಕಳೆದಿದ್ದು ಈ ಕಾರಣಕ್ಕಾಗಿ ಎಂದ ಅವರು, ಬಿಜೆಪಿಗರು ನಾಡಿನ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಬಿ.ಕೆ.ಹರಿಪ್ರಸಾದ್ ಅವರು ಆಗ್ರಹಿಸಿದ್ದಾರೆ.