ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಪದಗ್ರಹಣ

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಸಿಎಂ ಡಿ.ಕೆ. ಶಿವಕುಮಾರ್ ಅವರು ನೂತನ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ಧ್ವಜ ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, "ಕಾಂಗ್ರೆಸ್ ಪಕ್ಷದ ಧರ್ಮ ತ್ರಿವರ್ಣ ಧ್ವಜ, ನಮ್ಮ ಪವಿತ್ರ ಗ್ರಂಥ ಸಂವಿಧಾನ, ನಮ್ಮ ಜಾತಿ ಕಾಂಗ್ರೆಸ್ ಪಕ್ಷ. ನಮ್ಮ ದೇಶದಲ್ಲಿ ಅಧಿಕೃತ ಧರ್ಮವಿಲ್ಲ. ಎಲ್ಲಾ ಧರ್ಮಕ್ಕೂ ಸಮಾನ ಅವಕಾಶ ನೀಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ನೀಡಿದ ಸಂವಿಧಾನ. ಹೂವಿನ ಹಾರ, ಶಾಲಿನ ಬದಲು ಅದೇ ಹಣ ಪಕ್ಷಕ್ಕೆ ನೀಡಿ. ಅದೇ ನೀವು ನನಗೆ ನೀಡುವ ಕೊಡುಗೆ. ಬಿಜೆಪಿಯವರು ಧರ್ಮಾಧಾರಿತ ರಾಜಕೀಯ ಮಾಡಿಕೊಂಡು ಅಶಾಂತಿ ಸೃಷ್ಟಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಕಲ್ಪ ಮಾಡಬೇಕು. ಎಲ್ಲಾ ಶೋಷಿತರ ಪರವಾದ ಹೋರಾಟಗಳಿಗೆ ಕೈ ಜೋಡಿಸಬೇಕು. ನಾವು ಎಚ್ಚರ ತಪ್ಪಿದರೆ ನಿರ್ನಾಮ ಮಾಡಲು ವಿರೋಧಿಗಳು ಕಾಯುತ್ತಿದ್ದಾರೆ. ಧರ್ಮಾದಾರಿತ ರಾಜಕಾರಣ ಮಾಡುವುದಕ್ಕೆ ಅವಕಾಶ ನೀಡಬಾರದು." ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಪಕ್ಷವನ್ನು ತಳಮಟ್ಟದಿಂದ ಕಟ್ಟಿರುವ, ಕಾರ್ಯಕರ್ತರನ್ನು ಗುರುತಿಸುವಂತಹ, ಪಕ್ಷದ ಸಿದ್ದಾಂತ ಪಾಲಿಸುವ ವ್ಯಕ್ತಿಯ ಕೈಯಲ್ಲಿಯೇ ಪಕ್ಷದ ಜವಾಬ್ದಾರಿ ನೀಡಬೇಕು ಎಂದು ನಾವೆಲ್ಲರೂ ತೀರ್ಮಾನ ಮಾಡಿ ಕೊನೆಗೆ ಹರಿಪ್ರಸಾದ್ ಅವರಿಗೆ ಈ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಹರಿಪ್ರಸಾದ್ ಒಂದು ವರ್ಗಕ್ಕೆ ಸೀಮಿತವಾದ ನಾಯಕರಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತಾರೆ. ಇಂತಹ ನಾಯಕನ ಕೈಯಲ್ಲಿ ಜವಾಬ್ದಾರಿ ನೀಡಿದ್ದೇವೆ. ಅವರ ನೇತೃತ್ವದಲ್ಲಿ ಚುನಾವಣೆಗಳನ್ನು ಎದುರಿಸೋಣ. ಅವರು ನಮಗೆ ಶಕ್ತಿ ನೀಡುತ್ತಾರೆ ಎಂದು ಭರವಸೆ ಇಟ್ಟಿದ್ದೇನೆ" ಎಂದು ಅವರು ಹೇಳಿದ್ದಾರೆ.
"ಕಾಂಗ್ರೆಸ್ ಪಕ್ಷ ಶಿಸ್ತಿಗೆ ಹೆಸರಾಗಿದೆ. ಇಲ್ಲಿ ಯಾವುದೇ ಕಾರಣಕ್ಕೂ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಪಕ್ಷದ ಪೂಜೆಗೆ ಅವಕಾಶ. ಯಾರು ಎಷ್ಟೇ ದೊಡ್ಡವರಿದ್ದರೂ ಪಕ್ಷವೇ ದೊಡ್ಡದು. ನನ್ನ 58 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ನಾಯಕರು ಬೆಳೆದಿದ್ದಾರೆಯೇ ಹೊರತು ಅವರಿಂದ ಕಾಂಗ್ರೆಸ್ ಪಕ್ಷವಲ್ಲ. ನಾವೆಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನು ಕಟ್ಟಬೇಕು. ಯಾವುದೇ ಕಾರಣಕ್ಕೂ ಶಿಸ್ತನ್ನು ಮರೆಯಬಾರದು." ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, "ಇಂದು ಒಂದು ಮಹತ್ವದ ದಿನ. ಬಿ.ಕೆ. ಹರಿಪ್ರಸಾದ್ ಅವರು ಇಂದು ನೂತನ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಇಲ್ಲಿಯವರೆಗೆ ಡಿಕೆಶಿ ಅವರು ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಾಗೂ ಇಲ್ಲಿಯವರೆಗೆ ಅಧ್ಯಕ್ಷರಾಗಿ ಕೆಲಸ ಮಾಡಿದ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದವನ್ನು ತಿಳಿಸುತ್ತೇನೆ. ನಾನು ಈ ರಾಜ್ಯದ ವಿರೋಧ ಪಕ್ಷದ ನಾಯಕನಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ ಶಿವಕುಮಾರ್ ಅವರು ಈ ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಈ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದೇವೆ. ಪ್ರಣಾಳಿಕೆಯಲ್ಲಿ ಕೊಟ್ಟಿರುವಂತಹ ಭರವಸೆಗಳನ್ನು ಈಡೇರಿಸುವಂತ ಪ್ರಾಮಾಣಿಕ ಕೆಲಸವನ್ನು ಮಾಡಿದ್ದೇವೆ." ಎಂದು ಹೇಳಿದರು."ಹರಿಪ್ರಸಾದ್ ಅವರು ಕೆಳಹಂತದಿಂದ ಬಂದಿರುವವರು. ಸಾಮಾನ್ಯ ಕುಟುಂಬದಿಂದ ಬಂದಿರುವವರು. ಸಾಮಾನ್ಯ ಕಾರ್ಯಕರ್ತರಾಗಿ ಸುಮಾರು 1972 ಇಸವಿಯಲ್ಲಿ ಬಂದು ಇಲ್ಲಿಯವರೆಗೆ ಸುಮಾರು 5 ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ನಿಷ್ಠೆಯಿಂದ ಸೇವೆ ಮಾಡಿದ್ದಾರೆ. ಅವರು ವಿದ್ಯಾರ್ಥಿ ನಾಯಕನಾಗಿ, ಯುವ ಕಾಂಗ್ರೆಸ್‌ನ ನಾಯಕನಾಗಿ ಅನೇಕ ರಾಜ್ಯಗಳ ಉಸ್ತುವಾರಿಯನ್ನು ವಹಿಸಿಕೊಂಡು, ಸೇವಾದಳದ ಅಧ್ಯಕ್ಷನಾಗಿ ಸೇವೆ ಮಾಡಿದ್ದಾರೆ. ಅಂತವರು ಇಂದು ಬಹಳ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅವರ ನಿಷ್ಠೆ, ಸಿದ್ಧಾಂತಕ್ಕೆ ಬದ್ಧತೆ, ಕಾಂಗ್ರೆಸ್ ಕಾರ್ಯಕರ್ತನಾಗಿ ಅನೇಕ ಸ್ಥಾನಗಳಲ್ಲಿ ಕೆಲಸ ಮಾಡಿದ ಪರಿಣಾಮವಾಗಿ ಇವತ್ತು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಅವರಿಗೆ ಈ ನಿಟ್ಟಿನಲ್ಲಿ ನಾನು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ." ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಹರ್ಯಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾವ್ ನರೇಂದ್ರ ಸಿಂಗ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿಸಿ ಚಂದ್ರಶೇಖರ್, ಮಂಜುನಾಥ ಭಂಡಾರಿ, ತನ್ವೀರ್ ಸೇಠ್, ವಸಂತ ಕುಮಾರ್, ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಮಾಜಿ ಕೆಪಿಸಿಸಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ, ಆರ್ ವಿ ದೇಶಪಾಂಡೆ, ಮಾಜಿ ಸಚಿವರು, ಎಐಸಿಸಿ ಕಾರ್ಯದರ್ಶಿಗಳು, ಸಂಸದರು, ಶಾಸಕರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






