ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಸಮೀಪದ ಬಿಎಂಟಿಸಿ ಬಸ್ ನಿಲ್ದಾಣ ನಾಪತ್ತೆ!

ಬಿಎಂಟಿಸಿ ಬಸ್ - ಸಾಂದರ್ಭಿಕ ಚಿತ್ರ
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಹಿಂಭಾಗದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಪ್ರಯಾಣಿಕರ ತಂಗುದಾಣ ನಾಪತ್ತೆಯಾಗಿರುವುದು ವರದಿಯಾಗಿದೆ.
ತಂಗುದಾಣ ನಿರ್ಮಿಸಿದ್ದ ಒಂದು ವಾರದೊಳಗೆ ನಾಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಖಾಸಗಿ ಕಂಪೆನಿಯೊಂದು ಸ್ಟೀಲ್ನಿಂದ ಬಿಎಂಟಿಸಿ ಬಸ್ ನಿಲ್ದಾಣವನ್ನು ನಿರ್ಮಿಸಿತ್ತು. ಆದರೆ, ಒಂದು ವಾರದೊಳಗೆ ಸ್ಥಳದಿಂದ ಬಸ್ ನಿಲ್ದಾಣ ನಾಪತ್ತೆಯಾಗಿದೆ. ಕಂಪೆನಿಯ ಸಹಾಯಕ ಉಪಾಧ್ಯಕ್ಷ ಎನ್.ರವಿ ರೆಡ್ಡಿ ಅವರು ನಿರ್ಮಿಸಲಾಗಿದ್ದ ಬಸ್ ನಿಲ್ದಾವನ್ನು ನೋಡಲು ಸ್ಥಳಕ್ಕೆ ಬಂದಿದ್ದಾಗ, ಬಸ್ ನಿಲ್ದಾಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಎನ್ ರವಿ ರೆಡ್ಡಿ ಬಿಬಿಎಂಪಿ ಅಧಿಕಾರಿಗಳ ಬಳಿ ವಿಚಾರಿಸಿದಾಗ, ತಂಗುದಾಣವನ್ನು ತಾವು ತೆರವು ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಳಿಕ ಕಂಪೆನಿ ಸೆಪ್ಟೆಂಬರ್ 30ರಂದು ಈ ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಪೊಲಿಸರು, ತನಿಖೆ ಕೈಗೊಂಡಿದ್ದು, ಬಸ್ ನಿಲ್ದಾಣದ ಅಕ್ಕ-ಪಕ್ಕದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.





