2023ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ಮೋದಿಯ ಒಂದು ದಿನದ ಕರ್ನಾಟಕದ ಭೇಟಿಗೆ ಬೊಮ್ಮಾಯಿ ಸರಕಾರ ಖರ್ಚು ಮಾಡಿದ್ದು 33 ಕೋಟಿ ರೂ.ಗೂ ಹೆಚ್ಚು: RTI ದಾಖಲೆಯಿಂದ ಬಹಿರಂಗ

ಬಸವರಾಜ ಬೊಮ್ಮಾಯಿ/ ಪ್ರಧಾನಿ ನರೇಂದ್ರ ಮೋದಿ(PC : PTI)
ಬೆಂಗಳೂರು : 2023ರ ವಿಧಾನಸಭಾ ಚುನಾವಣೆಗೆ ಮೂರು ತಿಂಗಳು ಮೊದಲು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಎರಡು ಕಾರ್ಯಕ್ರಮಗಳಿಗೆ ಕರ್ನಾಟಕದ ಬಸವರಾಜ ಬೊಮ್ಮಾಯಿ ನೃತೃತ್ವದ ಆಗಿನ ಬಿಜೆಪಿ ಸರಕಾರ 33 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿದ್ದುದಾಗಿ ಆರ್ಟಿಐ ಅಡಿಯಲ್ಲಿ ಲಭ್ಯವಾದ ದಾಖಲೆಗಳು ಬಹಿರಂಗಪಡಿಸಿವೆ ಎಂದು deccanherald.com ವರದಿ ಮಾಡಿದೆ.
ಈ ಕಾರ್ಯಕ್ರಮಗಳಿಗೆ ಜನರನ್ನು ಕರೆದೊಯ್ಯಲು ಮಾತ್ರ ಸುಮಾರು 6.5 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ʼಲಂಚಮುಕ್ತ ಕರ್ನಾಟಕʼದ ಮಂಜುನಾಥ ಹಿರೇಚೌಟಿ ಅವರು ಸಲ್ಲಿಸಿದ್ದ ಆರ್ಟಿಐ ಅರ್ಜಿಯಿಂದ ಈ ಮಾಹಿತಿ ಹೊರಬಂದಿದೆ. ದಾಖಲೆಗಳ ಪ್ರಕಾರ, ಫೆಬ್ರವರಿ 27, 2023ರಂದು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಸರಕಾರ 18.81 ಕೋಟಿ ರೂ. ವೆಚ್ಚ ಮಾಡಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, “ಭವಿಷ್ಯದಲ್ಲಿಯೂ ಡಬಲ್ ಎಂಜಿನ್ ಸರಕಾರಕ್ಕಾಗಿ ಮತ ಚಲಾಯಿಸಿ” ಎಂದು ಜನರನ್ನು ಕೋರಿದ್ದರು.
ಈ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಜನರನ್ನು ತರಲು 4.11 ಕೋಟಿ ರೂ. ವೆಚ್ಚದಲ್ಲಿ 1,800 ಬಸ್ಗಳನ್ನು ಬಾಡಿಗೆಗೆ ಪಡೆದಿತ್ತು. ಜೊತೆಗೆ ಮುಖ್ಯ ವೇದಿಕೆಯ ನಿರ್ಮಾಣ, ಗ್ರೀನ್ ರೂಂ ಜರ್ಮನ್ ರಚನೆಯ ಟ್ರಸ್ ಪೆಂಡಲ್, ಮಾದರಿ ಪ್ರದರ್ಶನ ಮಳಿಗೆಗಳು ಹಾಗೂ ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಇತರ ಗಣ್ಯರಿಗೆ ಹೂವಿನ ಅಲಂಕಾರ ಸೇರಿದಂತೆ ಎರಡು ಪ್ರಮುಖ ಕಾಮಗಾರಿಗಳಿಗೆ 1.8 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಲಾಗಿದೆ.
ದಾಖಲೆಗಳ ಪ್ರಕಾರ, ಈ ವೆಚ್ಚಗಳಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಸೆಕ್ಷನ್ 4(ಜಿ) ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ.
ಶಿವಮೊಗ್ಗ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತೆರಳಿ ಮಧ್ಯಾಹ್ನ 2.45ರ ವೇಳೆಗೆ ರೋಡ್ಶೋ ಆರಂಭಿಸಿದರು. ವಿಮಾನ ಪ್ರಯಾಣದ ವೆಚ್ಚದ ವಿವರಗಳು ಲಭ್ಯವಿಲ್ಲದಿದ್ದರೂ, ಆರ್ಟಿಐ ಅಡಿಯಲ್ಲಿ ಲಭ್ಯವಾದ ಮತ್ತೊಂದು ದಾಖಲೆಯ ಪ್ರಕಾರ ಬೆಳಗಾವಿಯ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಇಲಾಖೆಯು 14.35 ಕೋಟಿ ರೂ. ವೆಚ್ಚ ಮಾಡಲು ಸರಕಾರದಿಂದ ಅನುಮೋದನೆ ಪಡೆದಿದೆ. ಇದರಲ್ಲಿ ಜನರನ್ನು ಸಾಗಿಸಲು ಬಸ್ ಗಳಿಗೆ 2.5 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಶಿವಮೊಗ್ಗ ಕಾರ್ಯಕ್ರಮದ ವೆಚ್ಚದ ಕುರಿತು ಹಿರೇಚೌಟಿ ಅವರು ಮಾರ್ಚ್ 2023ರಲ್ಲಿ ಆರ್ಟಿಐ ಅರ್ಜಿ ಸಲ್ಲಿಸಿದ್ದರು. ಆದರೆ ಕರ್ನಾಟಕ ಮಾಹಿತಿ ಆಯೋಗದಿಂದ ಆದೇಶ ದೊರೆತ ನಂತರವೇ ಜನವರಿ 2026ರಲ್ಲಿ ಈ ದಾಖಲೆಗಳನ್ನು ಪಡೆಯಲು ಸಾಧ್ಯವಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಹಿರೇಚೌಟಿ ಅವರು, ಸಾರ್ವಜನಿಕ ಹಣದ ಬಳಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. “ಸಾರ್ವಜನಿಕ ಹಣವು ರಾಜಕೀಯ ಪ್ರಚಾರದ ಸಂಪನ್ಮೂಲವಾಗಬಾರದು. ಚುನಾವಣೆಗಳಿಗೆ ಮುಂಚಿನ ತಿಂಗಳುಗಳಲ್ಲಿ ಅಭಿವೃದ್ಧಿ ಯೋಜನೆಗಳು ರಾಜಕೀಯ ಪ್ರದರ್ಶನದ ವೇದಿಕೆಯಾಗಬಾರದು. ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಯಾವುದೇ ಹಣಕಾಸಿನ ನಿರ್ಬಂಧಗಳಿಲ್ಲದ ಕಾರಣ, ಚುನಾವಣಾ ಪೂರ್ವ ವೆಚ್ಚ ನಿಯಂತ್ರಣಕ್ಕೆ ಭಾರತದಲ್ಲಿ ಶಾಸನಬದ್ಧ ವ್ಯವಸ್ಥೆ ಅಗತ್ಯವಿದೆ. ಸುಧಾರಣೆಗಳಿಲ್ಲದೆ ತೆರಿಗೆದಾರರು ರಾಜಕೀಯವಾಗಿ ಸಮಯದ ದುಂದುವೆಚ್ಚದ ಹೊರೆ ಹೊರುತ್ತಲೇ ಇರುತ್ತಾರೆ” ಎಂದು ಅವರು ಹೇಳಿದರು.
ಈ ಕುರಿತು ಪ್ರಶ್ನಿಸಿದಾಗ ಆಗಿನ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, “ಈ ವಿಷಯದಲ್ಲಿ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದೇ ವಿಷಯಕ್ಕೆ ಪ್ರತಿಕ್ರಿಯಿಸಿದ ಪ್ರಸ್ತುತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಇಂತಹ ವೆಚ್ಚಗಳನ್ನು ಮಿತಿಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಹೇಳಿದರು. “ನಾನು ಅಧಿಕಾರ ವಹಿಸಿಕೊಂಡ ನಂತರ ಕೆಟಿಪಿಪಿ ಕಾಯ್ದೆಯ ವಿನಾಯಿತಿಗಳನ್ನು ಕೊನೆಗೊಳಿಸಿದ್ದೇನೆ. ಆದರೆ ಪ್ರಧಾನ ಮಂತ್ರಿಗಳ ಕಾರ್ಯಕ್ರಮಗಳ ಸಂದರ್ಭದಲ್ಲಿ ವೆಚ್ಚವನ್ನು ಮಿತಿಗೊಳಿಸುವುದು ಸುಲಭವಲ್ಲ. ಖರ್ಚಿನ ಕಡತಗಳನ್ನು ಪರಿಶೀಲಿಸಿ ಈ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ” ಎಂದು ಅವರು ಹೇಳಿದ್ದಾರೆ






