ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಅತ್ಯುತ್ತಮ ಪುಸ್ತಕ ಪ್ರಶಸ್ತಿ ಪ್ರಕಟ

ಹುಬ್ಬಳ್ಳಿ: ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ 2023-24ನೇ ಸಾಲಿನಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಅತ್ಯುತ್ತಮ ಪುಸ್ತಕಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶನಿವಾರ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದ ಬಸವರಾಜ ಬೊಮ್ಮಾಯಿ, ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಹಲವಾರು ವರ್ಷಗಳಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಅತ್ಯುತ್ತಮ ಪುಸ್ತಕಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತ ಬಂದಿದೆ. ಅದರಂತೆ 2023-24ನೇ ಸಾಲಿಗೆ ಲೇಖಕಿಯರಿಗೆ ಮೀಸಲಾದ "ಅಕ್ಕ ಪ್ರಶಸ್ತಿ"ಗೆ ಡಾ. ಸೀತಾರಾಮನ್ ಅವರು ರಚಿಸಿದ "ಅಹಲ್ಯಾಬಾಯಿ ಹೋಳ್ಳರ" ಕೃತಿಯನ್ನು ಆಯ್ಕೆ ಮಾಡಲಾಗಿದೆ. ಹದಿನೆಂಟು ವರ್ಷದ ವಯೋಮಾನದೊಳಗಿನ ಮಕ್ಕಳಿಗೆ ಮೀಸಲಾದ "ಅರಳು ಮೊಗ್ಗು" ಪ್ರಶಸ್ತಿಯು ಕುಮಾರಿ ನವ್ಯ ಆರ್. ಕತ್ತಿ ಅವರು ರಚಿಸಿದ "ಮಾಯಾ ಗುಹೆ ಮತ್ತು ಇತರ ಮಕ್ಕಳ ಕತೆಗಳು" ಕೃತಿಗೆ, ಜಾನಪದ ಸಾಹಿತ್ಯಕ್ಕೆ ಮೀಸಲಾದ "ಜಾನಪದ ಸಿರಿ" ಪ್ರಶಸ್ತಿಯು ಶರೀಫ ಮಾಕಪ್ಪನವರ ಅವರ "ಜನಪದ ಕಲಾವಿದರು ಸುಧಾರಿಸಿಕೊಳ್ಳಬಹುದಾದ ಮಾರ್ಗೋಪಾಯಗಳು" ಕೃತಿಗೆ ಲಭಿಸಿದೆ.
ಪ್ರಶಸ್ತಿಯು ತಲಾ 25ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





