ಲಂಚ ಪ್ರಕರಣ: ಬಿಬಿಎಂಪಿ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಖುಲಾಸೆ

ಬೆಂಗಳೂರು: ‘ಬಿ’ ಗುಂಪಿನ ಸರಕಾರಿ ಸೇವೆಯಲ್ಲಿನ ಅಧಿಕಾರಿಯನ್ನು ಸರಕಾರವೇ ತೆಗೆದುಹಾಕಬೇಕೆ ವಿನಹ ಸರಕಾರಕ್ಕೆ ಅಧೀನವಾಗಿರುವ ಬಿಬಿಎಂಪಿ ಆಯುಕ್ತರು ವಜಾ ಮಾಡಲಾಗದು ಎಂದು ಅಭಿಪ್ರಾಯಪಟ್ಟಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಲಂಚ ಪ್ರಕರಣದಲ್ಲಿನ ಆರೋಪಿ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ನಗರ ಯೋಜನಾ ವಿಭಾಗದ ಹಿಂದಿನ ಸಹಾಯಕ ನಿರ್ದೇಶಕ ಎಸ್.ಎನ್.ದೇವೇಂದ್ರಪ್ಪ ಅವರನ್ನು ಖುಲಾಸೆಗೊಳಿಸಿದೆ.
ತಮ್ಮ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್ 7(ಎ) ಅಡಿ ದಾಖಲಾಗಿರುವ ಪ್ರಕರಣವನ್ನು ಕೈಬಿಡುವಂತೆ ಕೋರಿ ನಗರ ಯೋಜನಾ ವಿಭಾಗದ ಉಸ್ತುವಾರಿ ಸಹಾಯಕ ನಿರ್ದೇಶಕ ಎಸ್.ಎನ್.ದೇವೇಂದ್ರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ಪುರಸ್ಕರಿಸಿದ್ದಾರೆ.
ಕಾನೂನಿನ ಅನ್ವಯ ತನಿಖಾ ಸಂಸ್ಥೆಯು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ದೇವೇಂದ್ರಪ್ಪ ಅವರ ವಿರುದ್ಧ ಮುಂದುವರಿಯಲು ಸ್ವಾತಂತ್ರ್ಯ ಕಲ್ಪಿಸಲಾಗಿದೆ ಎಂದು ಹೇಳುವ ಮೂಲಕ ಪುನರ್ ತನಿಖೆಯ ಆಯ್ಕೆಯನ್ನು ನ್ಯಾಯಾಲಯ ಮುಕ್ತವಾಗಿರಿಸಿದೆ.
ಪ್ರಾಸಿಕ್ಯೂಷನ್‍ಗೆ ಬಿಬಿಎಂಪಿ ಆಯುಕ್ತರು ನೀಡಿರುವ ಆದೇಶವು ಸೂಕ್ತವಲ್ಲ. ಈ ಅನುಮತಿ ನೀಡಲು ಬಿಬಿಎಂಪಿ ಆಯುಕ್ತರು ಸಮರ್ಥರಲ್ಲ. ಈ ನೆಲೆಯಲ್ಲಿ ಸರಕಾರಿ ಪರ ವಕೀಲರ ವಾದದಲ್ಲಿ ಬಲವಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.
ಅಲ್ಲದೆ, ಸಕ್ಷಮ ಪ್ರಾಧಿಕಾರದಿಂದ ತನಿಖಾ ಸಂಸ್ಥೆಯು ಅನುಮತಿ ಪಡೆದು ಆರೋಪಿ ದೇವೇಂದ್ರಪ್ಪ ಅವರ ವಿರುದ್ಧ ಅಭಿಯೋಜನಾ ಪ್ರಕ್ರಿಯೆ ಮುಂದುವರಿಸಬಹುದಾಗಿದೆ ಎಂದು ಹೇಳಿದೆ.
ಪ್ರಕರಣವೇನು?: ಕಟ್ಟಡವೊಂದರ ಸ್ವಾಧೀನತಾ ಪ್ರಮಾಣ ಪತ್ರ(ಒಸಿ) ನೀಡಲು ದೇವೇಂದ್ರಪ್ಪ ಅವರು 40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ಭಾಗವಾಗಿ 20 ಲಕ್ಷ ಪಡೆಯುತ್ತಿದ್ದಾಗ 2021ರ ಫೆ.5ರಂದು ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಅವರನ್ನು ಬಂಧಿಸಿದ್ದರು.
ತನಿಖೆ ಪೂರ್ಣಗೊಳಿಸಿದ್ದ ಎಸಿಬಿ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಆರೋಪ ಪಟ್ಟಿ ಸಲ್ಲಿಸಲು ಅನುಮತಿಸಿದ್ದರು. ಇದನ್ನು ಪ್ರಶ್ನಿಸಿ ಹಾಗೂ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ದೇವೇಂದ್ರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ.







