ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಉಳಿಸುವುದಿಲ್ಲ: ಬಿ.ಆರ್.ಪಾಟೀಲ್

ಬೆಂಗಳೂರು : ‘ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ಉಳಿಸುವುದಿಲ್ಲ. ಇದರ ಅರಿವು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಗೊತ್ತಿದೆಯೇ?’ ಎಂದು ರಾಜ್ಯ ಸರಕಾರದ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಪ್ರಶ್ನಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಗರು ಪ್ರಾದೇಶಿಕ ಪಕ್ಷಗಳನ್ನು ಮುಗಿಸಿ ಬಿಡುತ್ತಾರೆ, ಇದು ಕುಮಾರಸ್ವಾಮಿಗೆ ಗೊತ್ತಿಲ್ಲವೇ?. ಇನ್ನೊಂದೆಡೆ, ಬಿಜೆಪಿ ಜೊತೆಗೆ ಹೋದ ಕುಮಾರಸ್ವಾಮಿಗೆ ಭ್ರಮ ನಿರಸನ ಆಗಿದೆ. ಹೀಗಾಗಿಯೇ, ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿಗೆ ಪಾಪ ಕೇಂದ್ರದಲ್ಲಿ ಏನು ತೊಂದರೆ ಆಗುತ್ತಿದೆಯೋ ಅಥವಾ ಅವರ ಮಾತು ಯಾರು ಕೇಳುತ್ತಿಲ್ಲವೊ’ ಎಂದು ಟೀಕಿಸಿದರು.
‘ಮುಂದೆ ಜೆಡಿಎಸ್ ಪಕ್ಷ ಇರುತ್ತದೆಯೋ, ಇಲ್ಲವೊ ಎಂಬುದನ್ನು ದೇವೇಗೌಡರಿಗೇ ಕೇಳಬೇಕು. ಜೆಡಿಎಸ್ ಪಕ್ಷದ ಜನಕ ಅವರೇ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯದ ಸಂಬಂಧಗಳು ಹದಗೆಡುತ್ತಿವೆ. ಇದು ಒಕ್ಕೂಟ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ಅನುದಾನ ಹಂಚಿಕೆ ಒಂದು ಕಡೆಯಾದರೆ, ಹಲವು ಕಾನೂನುಗಳನ್ನು ಬದಲಾವಣೆ ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.
ದಕ್ಷಿಣ ಭಾರತಕ್ಕೆ ಅನ್ಯಾಯ ಆಗಲು ಆಸ್ಪದ ನೀಡಬಾರದು :
ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆ ಇದೆ, ಉತ್ತರ ಭಾರತದಲ್ಲಿ ಹೆಚ್ಚಿದೆ. ಜನಗಣತಿ ಮುಗಿದ ಮೇಲೆ ಲೋಕಸಭಾ ಕ್ಷೇತ್ರಗಳು ಉತ್ತರ ಭಾರತಕ್ಕೆ ಹೆಚ್ಚಾಗಲಿವೆ ಎನ್ನುವ ಆತಂಕ ನಮಗೆ ಇದೆ. ಇದೇ ಕಾರಣಕ್ಕಾಗಿ ದಕ್ಷಿಣ ಭಾರತಕ್ಕೆ ಅನ್ಯಾಯ ಆಗಲು ಆಸ್ಪದ ನೀಡಬಾರದು ಎಂದು ನಾವು ಒಂದು ಸಭೆ ಮಾಡುತ್ತಿದ್ದೇವೆ ಎಂದರು.
ಈ ಸಭೆಯಲ್ಲಿ ದಕ್ಷಿಣ ಭಾರತದ ಪ್ರತಿನಿಧಿಗಳು ಹಾಜರಾಗುತ್ತಾರೆ. ಕೆಲವರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಉತ್ತರ ಭಾರತದ ಜನಪ್ರತಿನಿಧಿಗಳು ಹೆಚ್ಚಾರೆ ದಕ್ಷಿಣ ಭಾರತ ಕಡೆ ಯಾರೂ ತಿರುಗಿಯೂ ನೋಡುವುದಿಲ್ಲ ಎನ್ನುವುದನ್ನು ಹೇಳಿದ್ದಾರೆ. ಹೀಗಾಗಿ, ರಾಜ್ಯ ಸರಕಾರದ ಒಮ್ಮತ ಪಡೆದು ಕೇಂದ ಸರಕಾರ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ಒತ್ತಾಯಿಸಿದರು.







