‘ವಿಬಿ-ಜಿ ರಾಮ್ ಜಿ ಕಾಯ್ದೆ’ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದೊಂದೇ ದಾರಿ : ಬಿ.ಆರ್.ಪಾಟೀಲ್

ಬೆಂಗಳೂರು : ಕೇಂದ್ರ ಸರಕಾರವು ‘ವಿಬಿ-ಜಿ ರಾಮ್ ಜಿ' ಕಾಯ್ದೆಯನ್ನು ಜಾರಿ ಮಾಡಿದ್ದು, ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದೊಂದೇ ದಾರಿ, ಬೇರೆ ದಾರಿಯೇ ಇಲ್ಲ ಎಂದು ರಾಜ್ಯ ಸರಕಾರದ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಕರೆ ನೀಡಿದ್ದಾರೆ.
ಶನಿವಾರ ನಗರದ ಗಾಂಧಿ ಭವನದಲ್ಲಿ ಮನರೇಗಾ ರಕ್ಷಣಾ ಒಕ್ಕೂಟವು ಆಯೋಜಿಸಿದ್ದ ‘ಉದ್ಯೋಗ ಖಾತರಿ ಧ್ವಂಸದ ವಿಬಿ-ಜಿ ರಾಮ್-ಜಿ ಕಾನೂನಿನ ಅಪಾಯ ಮತ್ತು ಮುನ್ನೆಚ್ಚರಿಕೆ’ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರವು ಯಾವುದೇ ರೀತಿಯ ಚರ್ಚೆ ಮಾಡದೆ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ’ ಯೋಜನೆಯನ್ನು ತೆಗೆದು ಹಾಕಿದೆ. ಅದರ ಬದಲಿಗೆ ‘ವಿಬಿ-ಜಿ ರಾಮ್ ಜಿ' ಕಾಯ್ದೆಯನ್ನು ಜಾರಿ ಮಾಡುತ್ತಿದೆ. ಈಗಾಗಲೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಸೇರಿ ಬಹುತೇಕ ರಾಜ್ಯ ಸರಕಾರಗಳು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದು, ಈ ನೂತನ ಕಾಯ್ದೆ ಮೂಲಕ ರಾಜ್ಯಗಳನ್ನು ಮತ್ತಷ್ಟು ಆರ್ಥಿಕ ಬಿಕ್ಕಟ್ಟಿಗೆ ದೂಡೂತ್ತಿದೆ ಎಂದು ಅವರು ಆರೋಪಿಸಿದರು.
ದೇಶದ ಜನರಿಗೆ ಆಹಾರ ಭದ್ರತಾ ಕಾಯ್ದೆ ಮತ್ತು ಉದ್ಯೋಗದ ಹಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಇನ್ನು ಜನರು ಭರವಸೆಯಿಂದ ವಾಸಿಸುತ್ತಿದ್ದಾರೆ. ಇಲ್ಲದಿದ್ದರೆ, ಉದ್ಯೋಗವನ್ನು ಹುಡುಕುತ್ತಾ ನಗರಗಳಿಗೆ ವಲಸೆ ಬರುತ್ತಿದ್ದರು. ಕೃಷಿಯಲ್ಲಿ ಯಂತ್ರೋಪಕರಣಗಳು ಬಂದಿರುವುದರಿಂದ ಈಗಲೂ ಹಳ್ಳಿ ಜನರು ಉದ್ಯೋಗವನ್ನು ಹುಡುಕುತ್ತಾ ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಆದರೆ ಉದ್ಯೋಗ ಖಾತರಿ ಯೋಜನೆ ವಲಸೆ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ಅವರು ಹೇಳಿದರು.
ಚಿಂತಕ ಕೆ.ಪಿ ಸುರೇಶ್ ಮಾತನಾಡಿ, ಮನರೇಗಾವನ್ನು ‘ವಿಬಿ-ಜಿ ರಾಮ್ ಜಿ’ ಎಂದು ಹೆಸರು ಬದಲಿಸಿರುವುದು ಮಾತ್ರವಲ್ಲ, ಇಡೀ ಯೋಜನೆಯ ನಿಯಂತ್ರಣವನ್ನು ಕೇಂದ್ರ ಸರಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ದುಡಿಯುವ ಜನರ ಕೆಲಸದ ಹಕ್ಕನ್ನು ಕಸಿದುಕೊಳ್ಳುತ್ತದೆ. ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ಹೇರುತ್ತದೆ ಎಂದು ಆರೋಪಿಸಿದರು.
ಮನರೇಗಾ ಯೋಜನೆಗೆ ಶೇ.90ರಷ್ಟು ಅನುದಾನವನ್ನು ಕೇಂದ್ರ ಕೊಡುತ್ತಿತ್ತು. ಶೇ.10ರಷ್ಟನ್ನು ರಾಜ್ಯಗಳು ಭರಿಸುತ್ತಿದ್ದವು. ಯಾವ ಪ್ರದೇಶಕ್ಕೆ ಎಷ್ಟು ಉದ್ಯೋಗಗಳ ಬೇಡಿಕೆ ಇದೆ ಎಂಬುದನ್ನು ಗ್ರಾಮ ಸಭೆಗಳು ನಿರ್ಧರಿಸುತ್ತಿದ್ದವು. ಅದಕ್ಕೆ ಅನುಗುಣವಾಗಿ ಉದ್ಯೋಗ ಮತ್ತು ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈಗ ಯಾವ ರಾಜ್ಯದ ಯಾವ ಪ್ರದೇಶಕ್ಕೆ ಎಷ್ಟು ಉದ್ಯೋಗ ಕೊಡಬೇಕು ಎಂಬುದನ್ನೂ ಕೇಂದ್ರವೇ ನಿರ್ಧರಿಸಲಿದೆ ಎಂದು ಅವರು ಹೇಳಿದರು.
‘ವಿಬಿ-ಜಿ ರಾಮ್ ಜಿ’ ಕಾಯ್ದೆಯಡಿ ಕೇಂದ್ರದ ಪಾಲನ್ನು ಶೇ.60ಕ್ಕೆ ಇಳಿಸಿದ್ದು, ರಾಜ್ಯಗಳು ಶೇ.40ರಷ್ಟು ಅನುದಾನವನ್ನು ಭರಿಸಬೇಕೆಂದು ಹೇಳುತ್ತಿದೆ. ಇಡೀ ತೆರಿಗೆ ವ್ಯವಸ್ಥೆಯಲ್ಲಿ ಶೇ.75 ಆದಾಯವನ್ನು ಪಡೆಯುವ ಕೇಂದ್ರ ಸರಕಾರವು, ರಾಜ್ಯಗಳಿಗೆ ದೊರೆಯಬೇಕಾದ ನ್ಯಾಯಯುತ ಅನುದಾನವನ್ನು ಕಡಿತ ಮಾಡಿದೆ. ಅಲ್ಲದೆ, ರಾಜ್ಯಗಳಿಗೆ ಹೆಚ್ಚಿನ ಹೊರೆ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಶೇ.40ರಷ್ಟು ಅನುದಾನವನ್ನೂ ಕೇಂದ್ರವೇ ಪರೋಕ್ಷವಾಗಿ ಕೊಡುತ್ತದೆ. ಆದುದರಿಂದ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನ ಕಡಿತ ಮಾಡಿ ಹೆಚ್ಚಿನ ಹೊರೆಯಾಗುವಂತೆ ಮಾಡಿದೆ ಎಂದು ಅವರು ಹೇಳಿದರು.
ರೈತ ಸಂಘದ ಮುಖಂಡ ಎನ್.ಡಿ. ವಸಂತ್ ಕುಮಾರ್ ಮಾತನಾಡಿ, ಬಿಜೆಪಿ ಸರಕಾರವು ದೇಶಾದ್ಯಂತ ಉದ್ಯೋಗ ಖಾತರಿ ನೀಡುವ ಕಾಯ್ದೆಯನ್ನೇ ತಲೆಕೆಳಗೆ ಮಾಡಲು ಸಂಚು ರೂಪಿಸಿದೆ. ಅತ್ಯುತ್ತಮ ಕಾಯ್ದೆಯನ್ನು ಜಾರಿಗೆ ತಂದಿದ್ದ ಕಾಂಗ್ರೆಸ್, ಈಗ ಅದನ್ನು ಉಳಿಸಿಕೊಳ್ಳುವ ರೀತಿ ಸಮರ್ಥವಾಗಿ ಹೋರಾಟ ಮಾಡುತ್ತಿಲ್ಲ. ಹೀಗಾಗಿ ಮನರೇಗಾ ಉಳಿವಿಗಾಗಿ ಎಲ್ಲರೂ ಹೋರಾಟ ಕಟ್ಟಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ದಲಿತ ಮುಖಂಡ ಇಂಧೂದರ ಹೊನ್ನಾಪುರ, ಶಾರಾದಾ ಗೋಪಾಲ್, ಪ್ರಕಾಶ್ ಕಮ್ಮರಡಿ, ಮೈತ್ರೇಯಿ ಕೃಷ್ಣನ್, ಚೆನ್ನಮ್ಮ, ರೇಣುಕ ಸೇರಿದಂತೆ ಮತ್ತಿತರರು ಇದ್ದರು.
‘ಬಿಜೆಪಿ ದೇಶದ ಅಧಿಕಾರ ಹಿಡಿದಾಗಿನಿಂದ ಭಾರತದ ಪ್ರಗತಿಯಲ್ಲಿ ಹಿಂಚಲನೆ ಆರಂಭವಾಗಿದೆ. ಈಗ, ಮನರೇಗಾ ಯೋಜನೆಯನ್ನು ಮಣ್ಣುಪಾಲು ಮಾಡುತ್ತಿದೆ. ಮನರೇಗಾ ಉಳಿಸುವ ಹೋರಾಟದಲ್ಲಿ ಕಾಂಗ್ರೆಸ್ ಮುಂಚೂಣಿಗೆ ಬರುತ್ತಿಲ್ಲ. ಕಾಂಗ್ರೆಸ್ ಅನ್ನು ನೆಚ್ಚಿ ಹೋರಾಟ ಕಟ್ಟಲು ಸಾಧ್ಯವೂ ಇಲ್ಲ. ಹೀಗಾಗಿ ಎಲ್ಲ ಜನಪರ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು’
-ಇಂಧೂದರ ಹೊನ್ನಾಪುರ, ಹಿರಿಯ ಪತ್ರಕರ್ತ
ವಿಚಾರ ಸಂಕಿರಣದಲ್ಲಿ ತೆಗೆದುಕೊಂಡ ನಿರ್ಣಯಗಳು:
1. ಇದೇ ಜ.26ರಂದು ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲೂ ಗ್ರಾಮಸಭೆ ಮಾಡಿ ‘ವಿಬಿ-ಜಿ ರಾಮ್ ಜಿ’ ಕಾನೂನನ್ನು ತಿರಸ್ಕರಿಸಬೇಕು.
2. ಒಕ್ಕೂಟದಿಂದ ‘ವಿಬಿ-ಜಿ ರಾಮ್ ಜಿ’ ಮತ್ತು ಹಿಂದಿನ ಮನರೇಗಾ ಕುರಿತು ಜನರಿಗೆ ಮಾಹಿತಿ ನೀಡುವ ಕರಪತ್ರಗಳನ್ನು ಹೊರತರುವುದು.
3. ಹುತಾತ್ಮ ದಿನವಾದ ಜ.30ರಂದು ತಾಲೂಕು, ಜಿಲ್ಲಾ ಮಟ್ಟದಿಂದ ಪ್ರಧಾನ ಮಂತ್ರಿಗಳಿಗೆ ಕಾಯ್ದೆಯನ್ನು ಹಿಂಪಡೆಯಲು ಮನವಿ ಸಲ್ಲಿಸುವುದು.
4. ದಿಲ್ಲಿಯಲ್ಲಿ ಜ. 22ರಂದು ನಡೆಯುತ್ತಿರುವ ಸಭೆಗೆ ಒಕ್ಕೂಟದಿಂದ ಕನಿಷ್ಟ 20 ಜನ ಭಾಗವಹಿಸುವುದು.
5. ಸಹಭಾಗಿ ಸಂಘಟನೆಗಳಾದ ಸಂಯುಕ್ತ ಹೋರಾಟ ಮತ್ತು ಜೆಸಿಟಿಯು ಸಂಘಟಿಸುತ್ತಿರುವ ಜ.21ರ ಟೌನ್ ಹಾಲ್ ಎದುರು ನಡೆಯುವ ಹೋರಾಟ ಮತ್ತು ಫೆ.12ರಂದು ನಡೆಯುವ ಕರ್ನಾಟಕ ಬಂದ್‍ಗಳಲ್ಲಿಯೂ ಒಕ್ಕೂಟವು ಭಾಗವಹಿಸಿ ಬೆಂಬಲ ನೀಡುವುದು.
6. ಫೆ.2ಕ್ಕೆ ಮನರೇಗಾಗೆ 20 ವರ್ಷ ಆಗುವ ಸಂದರ್ಭದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಮಹಾ ಪಂಚಾಯತ್ ನಡೆಸಲು ಯೋಚಿಸಲಾಗಿದೆ.







