ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಯಡಿಯೂರಪ್ಪ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪುಷ್ಪಗುಚ್ಚವನ್ನು ನೀಡಿ ಶುಭ ಕೋರಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ಹಿನ್ನಲೆ ದಿಲ್ಲಿಯಲ್ಲಿ ನಡೆದ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆಯಲ್ಲಿಯೂ ಯಡಿಯೂರಪ್ಪ ಭಾಗಿಯಾಗಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‍ಡಿಎ ಗೆಲುವಿಗೆ ಪಣ ತೊಟ್ಟಿರುವ ಬಿಜೆಪಿ, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಕಾರ್ಯತಂತ್ರಗಳ ಕುರಿತು ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಬಿಹಾರ ಆಡಳಿತಾರೂಢ ಎನ್‍ಡಿಎ ನಿನ್ನೆಯಷ್ಟೇ ಬಿಹಾರ ಚುನಾವಣೆಗೆ ಸೀಟು ಹಂಚಿಕೆ ಘೋಷಿಸಿದೆ.
ಪಕ್ಷಗಳ ನಡುವಿನ ನಿರ್ಧಾರದಂತೆ ಬಿಜೆಪಿ ಮತ್ತು ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ. ಉಳಿದಂತೆ ಲೋಕ ಜನಶಕ್ತಿ ಪಕ್ಷಕ್ಕೆ (ರಾಮ್‍ವಿಲಾಸ್) 29, ರಾಷ್ಟ್ರೀಯ ಲೋಕ್ ಮೋರ್ಚಾ ಮತ್ತು ಹಿಂದೂಸ್ತಾನಿ ಆವಂ ಮೋರ್ಚಾಗೆ ತಲಾ 6 ಕ್ಷೇತ್ರಗಳನ್ನ ಬಿಟ್ಟುಕೊಡಲಾಗಿದೆ. ನವೆಂಬರ್ 6 ಮತ್ತು 11ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ನ.14ಕ್ಕೆ ಫಲಿತಾಂಶ ಹೊರಬೀಳಲಿದೆ.
ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.







