ವಾಲ್ಮೀಕಿ ನಿಗಮದ ಅಕ್ರಮ | ಬಳ್ಳಾರಿ ಸಂಸದ, ಶಾಸಕರ ರಾಜೀನಾಮೆಗೆ ಬಿ.ಶ್ರೀರಾಮುಲು ಆಗ್ರಹ

ಬಿ.ಶ್ರೀರಾಮುಲು
ಬೆಂಗಳೂರು : ವಾಲ್ಮೀಕಿ ನಿಗಮದ 187ಕೋಟಿ ರೂ. ಅಕ್ರಮ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಹೈಕೋರ್ಟ್ ಕಪಾಳಮೋಕ್ಷ ಮಾಡಿದೆ. ಆ ಹಿನ್ನೆಲೆಯಲ್ಲಿ ಬಳ್ಳಾರಿ ಸಂಸದ ಹಾಗೂ ನಾಲ್ವರು ಶಾಸಕರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ಆಗ್ರಹಿಸಿದ್ದಾರೆ.
ಬುಧವಾರ ಇಲ್ಲಿನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂಸದ ನಾಗೇಂದ್ರ, ಶಾಸಕರಾದ ನಾಗೇಂದ್ರ, ಕಂಪ್ಲಿ ಗಣೇಶ್, ಡಾ.ಶ್ರೀನಿವಾಸ್, ಭರತ್ ರೆಡ್ಡಿ ಎಲ್ಲರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು. ವಾಲ್ಮೀಕಿ ನಿಗಮದ ಹಗರಣದ ತನಿಖೆಯನ್ನು ಹೈಕೋರ್ಟ್ ಸಿಬಿಐಗೆ ನೀಡಿದೆ. ಎಸ್ಐಟಿ ರಚನೆ ಮೂಲಕ ಕ್ಲೀನ್ಚಿಟ್ ಕೊಡಲಾಗಿತ್ತು ಎಂದು ಆರೋಪಿಸಿದರು.
ಭ್ರಷ್ಟಾಚಾರ ಮಾಡಿ, ಸರಕಾರದ ತೆರಿಗೆ ಹಣವನ್ನು ಚುನಾವಣೆಗೆ ಬಳಸಿದ್ದರು. ಈ ಹಗರಣಕ್ಕೆ ಹಣಕಾಸು ಇಲಾಖೆ ನಿರ್ವಹಿಸುವ ಸಿಎಂ ಸಿದ್ದರಾಮಯ್ಯ ಅವರೂ ಜವಾಬ್ದಾರರು. ರಾಜಕಾರಣದಲ್ಲಿ ಗೆಲುವು ಶಾಶ್ವತವೇ?. ಒಬ್ಬ ಮನುಷ್ಯ ಗೆಲ್ಲಲು ಇನ್ನೊಬ್ಬ ಸೋಲಲೇಬೇಕು. ಪ್ರಧಾನಿ, ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದವರೂ ಸೋತಿದ್ದಾರೆ ಎಂದು ಅವರು ನುಡಿದರು.
ವಾಲ್ಮೀಕಿ ನಿಗಮದ 187 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿದ್ದಾರೆ. ಇದು ಮೋಸ ಮಾಡಿ ಗೆದ್ದಂತೆ ಅಲ್ಲವೇ?. ಸೋತವರನ್ನು ಗೇಲಿ ಮಾಡದಿರಿ. ವಿಪಕ್ಷದಲ್ಲಿ ಇದ್ದವರು ಆಡಳಿತ ಪಕ್ಷದವರನ್ನು ತಪ್ಪು ಆದಾಗ, ಕೆಲವೊಂದು ವಿಷಯದಲ್ಲಿ ಟೀಕಿಸುತ್ತಾರೆ. ಆಡಳಿತ ಪಕ್ಷಕ್ಕೂ ತಾಳ್ಮೆಬೇಕು ಎಂದು ತಿಳಿಸಿದರು.







