ವಿಧಾನಸಭೆ | ‘ಮುಷ್ಕರ ಬೇಡ’ ಸರಕಾರಿ ವೈದ್ಯರು-ಸಿಬ್ಬಂದಿ ಜತೆ ಮಾತುಕತೆ ನಡೆಸಲು ಪಕ್ಷಾತೀತ ಒತ್ತಾಯ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರಕ್ಕೆ ಸರಕಾರಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ವರ್ಗ ಮುಂದಾಗಿದ್ದು, ರಾಜ್ಯ ಸರಕಾರ ಕೂಡಲೇ ಚರ್ಚೆ ಮಾಡಿ ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ಮಾಡಬೇಕು ಎಂದು ಪಕ್ಷತೀತವಾಗಿ ಒತ್ತಾಯಿಸಲಾಯಿತು.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ಬಳಿಕ ಬಿಜೆಪಿಯ ಸದಸ್ಯ ವಿ.ಸುನಿಲ್ ಕುಮಾರ್, ವೈದ್ಯರ ಮುಷ್ಕರವನ್ನು ಪ್ರಸ್ತಾಪಿಸಿ, ಔಷಧಿಗಳ ಪೂರೈಕೆ ವರ್ಗಾವಣೆಯ ರೀತಿ ಮತ್ತು ಖಾಲಿ ಹುದ್ದೆಗಳ ನೇಮಕ ಬೇಡಿಕೆಗಳ ಬಗ್ಗೆ ಸರಕಾರಿ ವೈದ್ಯರು ಮತ್ತು ಸಿಬ್ಬಂದಿಗಳು ನಾಳೆಯಿಂದ ಹೊರ ರೋಗಿಗಳ ವಿಭಾಗದ ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ಆರಂಭಿಸುತ್ತಿದ್ದಾರೆ ಮಾ.16 ರಿಂದ ತುರ್ತು ಸೇವೆಗಳನ್ನು ನಿಲ್ಲಿಸುವುದಾಗಿ ಎಚ್ಚರಿಸಿದ್ದಾರೆ.
ಆದರೆ, ಒಂದು ತಿಂಗಳ ಹಿಂದೆಯೇ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಗಿದ್ದು, ಮುಷ್ಕರದ ನೋಟಿಸ್ ಕೂಡ ನೀಡಲಾಗಿದೆ. ಸರಕಾರ ಅವರನ್ನು ಚರ್ಚೆಗೆ ಕರೆದಿಲ್ಲ. ಹಟ ಬಿಟ್ಟು ಸಂಘರ್ಷದ ಬದಲಿಗೆ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಎಂದು ಒತ್ತಾಯಿಸಿದರು.ಇದಕ್ಕೆ ಆಡಳಿತ ಪಕ್ಷದ ಸದಸ್ಯರಾದ ಅಶೋಕ್, ಹಂಪನಗೌಡ ಬಾದರ್ಲಿ ಮತ್ತಿತರರು ಇದಕ್ಕೆ ಧ್ವನಿಗೂಡಿಸಿದರು.
ಇದಕ್ಕೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಸಂಘದ ಪದಾಧಿಕಾರಿಗಳ ಜೊತೆ ಎರಡು ಬಾರಿ ಮಾತುಕತೆ ಆಗಿದ್ದು, ಐದು ದಶಕಗಳ ಹಿಂದಿನ ಬೇಡಿಕೆಗಳನ್ನು ಅವರು ಮಂಡಿಸುತ್ತಿದ್ದಾರೆ. ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಬದಲಾವಣೆ ಕೌನ್ಸಿಲಿಂಗ್ ಪದ್ಧತಿಯ ವರ್ಗಾವಣೆ ಸೇರಿದಂತೆ ಹಲವಾರು ವಿಚಾರಗಳು ಸರಕಾರದ ಗಮನದಲ್ಲಿದೆ ಎಂದರು.
ವರ್ಗಾವಣೆಯ ನ್ಯೂನ್ಯತೆಗಳನ್ನು ಸರಿಪಡಿಸಲಾಗುವುದು. ಇಂದು ವೈದ್ಯಕೀಯ ಸಂಘದ ಪದಾಧಿಕಾರಿಗಳ ಜೊತೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು. ಬೇಡಿಕೆಗಳ ಈಡೇರಿಕೆಗೆ ಸಾಧ್ಯ ಇರುವ ಎಲ್ಲ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಲಿದ್ದು, ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರ ಹಿತ ದೃಷ್ಟಿಯಿಂದ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸುವುದಾಗಿ ಸಚಿವರು ಭರವಸೆ ನೀಡಿದರು.







