ಶಾಸಕರ ಭವನದಲ್ಲೂ ಗ್ಯಾಸ್ ಸಿಲಿಂಡರ್ ಸಮಸ್ಯೆ: ಊಟ-ತಿಂಡಿ ಕೊರತೆ-ಮೇಲ್ಮನೆಯಲ್ಲಿ ಚರ್ಚೆ

ಬೆಂಗಳೂರು : ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಕೊರತೆಯಿಂದಾಗಿ ಶಾಸಕರ ಭವನ ಮತ್ತು ಸುತ್ತಮುತ್ತಲಿನ ಹೋಟೆಲ್‍ಗಳಲ್ಲಿ ಸಕಾಲಕ್ಕೆ ಸರಿಯಾಗಿ ಊಟ, ತಿಂಡಿ ಸಿಗುತ್ತಿಲ್ಲ ಎಂದು ಮೇಲ್ಮನೆಯ ಸದಸ್ಯರು ಕಲಾಪದಲ್ಲಿ ಅಳಲು ತೋಡಿಕೊಂಡ ಪ್ರಸಂಗ ಬುಧವಾರ ನಡೆಯಿತು.
ಬುಧವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ್ ಹೊರಟ್ಟಿ ಪ್ರಶ್ನೋತ್ತರ ಕಲಾಪವನ್ನು ಪ್ರಾರಂಭಿಸಲು ಮುಂದಾದರು. ಈ ವೇಳೆ ಎದ್ದುನಿಂತ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಈ ವಿಷಯ ಪ್ರಸ್ತಾಪಿಸಿ, ಶಾಸಕರಿಗೆ ಶಾಸಕರ ಭವನ ಮತ್ತು ಸುತ್ತಲಿನ ಹೋಟೆಲ್‍ಗಳಲ್ಲಿ ಸರಿಯಾದ ಊಟ-ತಿಂಡಿ ಸಿಗುತ್ತಿಲ್ಲ. ಒಂದು ವಾರದಿಂದ ನಾವೆಲ್ಲಾ ಪರದಾಡುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಕೊನೆಗೆ ಇಂದಿರಾ ಕ್ಯಾಂಟೀನ್‍ನಲ್ಲಿ ತಿನ್ನೋಣವೆಂದರೆ ಅಲ್ಲಿಯೂ ಗ್ಯಾಸ್ ಸಮಸ್ಯೆಯಿಂದ ಊಟ-ತಿಂಡಿ ಸಿಗುತ್ತಿಲ್ಲ. ಇದು ಕೇವಲ ಶಾಸಕರು, ಅಧಿಕಾರಿಗಳಷ್ಟೇ ಸಮಸ್ಯೆಯಲ್ಲ. ಗ್ಯಾಸ್ ತೊಂದರೆಯಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ದಯಮಾಡಿ ಸಮಸ್ಯೆಯನ್ನು ಪರಿಹರಿಸಿ ಎಂದು ಸರಕಾರಕ್ಕೆ ಮನವಿ ಮಾಡಿದರು.
ಈ ವೇಳೆ ಸಭಾಪತಿ ಹೊರಟ್ಟಿ ಮಾತನಾಡಿ, ಇದಕ್ಕೆಲ್ಲ ಸರಕಾರವೇ ಉತ್ತರ ಕೊಡಬೇಕು. ನಿನಗೆ 10 ನಿಮಿಷ ಅನುಮತಿ ಕೊಡುತ್ತೇನೆ, ಹೋಗಿ ತಿಂಡಿ ತಿಂದು ಬಾ ಎಂದು ಐವಾನ್ ಡಿಸೋಜಾಗೆ ಹೇಳಿದರು. ಈ ವೇಳೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ, ಡಿಸೋಜಾ ಅವರು ಹಸಿವಿನಿಂದ ಸದನಕ್ಕೆ ಬಂದಿದ್ದಾರೆ, ದಯವಿಟ್ಟು ಇಡ್ಲಿ-ವಡಾ ಕೊಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಆಗ ಪ್ರತಿಕ್ರಿಯಿಸಿದ ಸಚಿವ ಝಮೀರ್ ಅಹ್ಮದ್ ಮಾತನಾಡಿ, ಇಡ್ಲಿ-ವಡೆ ಸಿಗುತ್ತಿಲ್ಲ, ಏಕೆಂದರೆ ಗ್ಯಾಸ್ ಸಿಗುತ್ತಿಲ್ಲ ಪ್ರತಿಕ್ರಿಯಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಎದ್ದು, ಇದು ಕೇಂದ್ರದ ಗ್ಯಾಸ್ ಟ್ರಬಲ್ ಕತೆ ಎಂದು ಪರೋಕ್ಷವಾಗಿ ಪ್ರತಿಪಕ್ಷದ ಸದಸ್ಯರನ್ನು ಕಿಚಾಯಿಸಿದರು.







