‘ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ತುಂಬಿರಬೇಕು’; ಷರತ್ತು ಸಡಿಲಿಕೆ: 2 ತಿಂಗಳ ವಿನಾಯಿತಿ

ಬೆಂಗಳೂರು : ಒಂದನೇ ತರಗತಿ ಪ್ರವೇಶಕ್ಕೆ, ಮಕ್ಕಳಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂದ ನಿಯಮವನ್ನು 2026-27ನೆ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯ ಆಗುವಂತೆ ಎರಡು ತಿಂಗಳ ಅವಧಿಗೆ ಸರಕಾರ ವಿನಾಯಿತಿ ನೀಡಿದೆ.
ಗುರುವಾರ ವಿಧಾನಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಒಂದನೇ ತರಗತಿ ದಾಖಲಾತಿಗೆ 6 ವರ್ಷ ತುಂಬಿರಲೇಬೇಕೆಂಬ ನಿಯಮವನ್ನು ಸಡಿಲಿಸಿ ವಿನಾಯಿತಿ ನೀಡಲಾಗಿದೆ. 60 ದಿನಗಳ ಸಡಿಲಿಕೆ ಮಾಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ದಾಖಲಾತಿ ತಂತ್ರಾಂಶದಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದರು.
ಒಂದನೇ ತರಗತಿಗೆ ವಿನಾಯಿತಿ ನೀಡಿದಂತೆ ಎಲ್‍ಕೆಜಿ ಹಾಗೂ ಯುಕೆಜಿ ಮಟ್ಟದಲ್ಲೇ ದಾಖಲಾತಿ ವಯೋಮಿತಿ ನಿಗದಿ ಮಾಡುವ ಸಂಬಂಧ ಶೀಘ್ರದಲ್ಲೇ ಕಾಯ್ದೆ ತರಲಾಗುವುದು. ಎಲ್‍ಕೆಜಿ, ಯುಕೆಜಿಗೆ ಮಕ್ಕಳ ದಾಖಲಾತಿಗೆ ಇದೀಗ ವಯೋಮಿತಿ ನಿಗದಿಗೆ ಯಾವುದೇ ಕಾನೂನು ಇಲ್ಲ. ಹೀಗಾಗಿ ದಾಖಲಾತಿಗೆ ಸಮಸ್ಯೆಯಾಗುತ್ತಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಒಂದನೇ ತರಗತಿಗೆ ಆರು ವರ್ಷ ತುಂಬಿರಬೇಕೆಂಬ ಕಡ್ಡಾಯ ನಿಯಮಕ್ಕೆ ಎಲ್‍ಕೆಜಿ, ಯುಕೆಜಿಗೆ ಮಕ್ಕಳ ದಾಖಲಾತಿ ವಯೋಮಿತಿ ನಿಗದಿ ಸಂಬಂಧ ಕಾಯ್ದೆಯನ್ನು ರೂಪಿಸಿ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷಗಳ ಉಪನಾಯಕ ಅರವಿಂದ್ ಬೆಲ್ಲದ್, ಮಕ್ಕಳ ಶಾಲಾ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ಈ ಸಮಸ್ಯೆ ಆಗುತ್ತದೆ. ಹೀಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.






