Budget Session 2026 | ʼಐಪಿಎಲ್ ಟಿಕೆಟ್ ಕೊಡಿಸಿʼ : ವಿಧಾನಸಭೆಯಲ್ಲಿ ಸದಸ್ಯರ ಆಗ್ರಹ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ‘ಶಾಸಕರು ಮತ್ತವರ ಕುಟುಂಬದ ಸದಸ್ಯರಿಗೆ ಐಪಿಎಲ್ ಕ್ರಿಕೆಟ್ನ ಟಿಕೆಟ್ಗಳನ್ನು ನೀಡಬೇಕು’ ಎಂದು ಪಕ್ಷಬೇಧ ಮರೆತು ಸದಸ್ಯರು ಆಗ್ರಹಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಗುರುವಾರ ವಿಧಾನಸಭೆಯಲ್ಲಿ ಜಕ್ಕೂರು ವೈಮಾನಿಕ ತರಬೇತಿ ಶಾಲೆಯ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವ ಸರಕಾರದ ಉದ್ದೇಶಕ್ಕೆ ಆಕ್ಷೇಪಿಸಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿದ ವಿಷಯಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಸದಸ್ಯರು, ‘ಶಾಸಕರಿಗೆ ಗೌರವವಿಲ್ಲ, ನಮಗೆ ಒಂದೇ ಒಂದು ಟಿಕೆಟ್ ಕೊಡುತ್ತಾರೆ. ಟಿಕೆಟ್ಗಳನ್ನು ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.
ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ವಿಜಯಾನಂದ ಕಾಶಪ್ಪನವರ್, ಕನಿಷ್ಟ ಪಕ್ಷ ಒಬ್ಬ ಶಾಸಕರಿಗೆ ನಾಲ್ಕೈದು ಟಿಕೆಟ್ಗಳನ್ನು ನೀಡಬೇಕು. ಜನಪ್ರತಿನಿಧಿಗಳಿಗೆ ಯಾವುದೇ ಬೆಲೆ ಇಲ್ಲವೇ?. ಒಂದು ಟಿಕೆಟ್ ಕೊಡುತ್ತಾರೆ. ನಾವು ನಮ್ಮ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗುವುದು ಬೇಡವೇ?. ಐಪಿಎಲ್ ಟಿಕೆಟ್ಗಳನ್ನು ಕಾಳಸಂತೆಯಲ್ಲಿ 15ರಿಂದ 20 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದು, ನಾವು ಸಾಮಾನ್ಯಜನರ ಜತೆಗೆ ಸರದಿಯಲ್ಲಿ ನಿಲ್ಲಬೇಕೇ?. ಪ್ರತ್ಯೇಕ ಗ್ಯಾಲರಿ ಮಾಡಬೇಕು ಎಂದು ಕೋರಿದರು.
ಕಾಶಪ್ಪನವರ್ ಪ್ರಸ್ತಾಪಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಬಹುತೇಕ ಸದಸ್ಯರು ಧ್ವನಿಗೂಡಿಸಿದರು. ‘ಕ್ರಿಕೆಟ್ ಮಂಡಳಿಯವರಿಗೆ ಏನು ಹಣಕಾಸಿನ ಕೊರತೆಯೆ?. ಪ್ರತಿಷ್ಠಿತ ಕಂಪೆನಿಗಳ ಪ್ರಾಯೋಜಕತ್ವದ ಮೂಲಕ ಕೋಟ್ಯಂತರ ರೂ.ಸಂಪಾದನೆ ಮಾಡುತ್ತಿದ್ದಾರೆ. ಹೀಗಾಗಿ ಶಾಸಕರಿಗೆ ಟಿಕೆಟ್ಗಳನ್ನು ನೀಡಬೇಕು ಎಂದು ಬಿಜೆಪಿ ಸದಸ್ಯ ಡಾ.ಅಶ್ವತ್ಥ ನಾರಾಯಣ್ ಆಗ್ರಹಿಸಿದರು.
‘ಇತ್ತೀಚೆಗೆ ಸಂಭವಿಸಿದ ಕಾಲ್ತುಳಿದ ಹಿನ್ನೆಲೆಯಲ್ಲಿ 11 ಮಂದಿ ಅಸುನೀಗಿದ್ದಾರೆ. ಕ್ರಿಕೆಟ್ ತರಬೇತಿ ಸರಕಾರ ಜಾಗ ನೀಡಿದೆ. ಆದರೆ, ಆ ಮೈದಾನದಲ್ಲಿ ಮದ್ಯದಂಗಡಿಗೆ ಪರವಾನಗೆ ನೀಡಲಾಗಿದೆ. ಆದರೆ, ಅವರು ನಮ್ಮಗೆ ಒಂದು ಟಿಕೆಟ್ ನೀಡಲು ಬೇಡುವ ಸ್ಥಿತಿ ನಿಜಕ್ಕೂ ಶೋಚನೀಯ. ನಮ್ಮ ಕುಟುಂಬ ಸದಸ್ಯರು ಕೇಳಿದರೆ ಒಂದು ಟಿಕೆಟ್ ಕೊಡಲು ಆಗುವುದಿಲ್ಲ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಉಲ್ಲೇಖಿಸಿದರು.
ಬಳಿಕ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ‘ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಕ್ರಿಕೆಟ್ ಮಂಡಳಿಯ ಪ್ರತಿನಿಧಿಗಳನ್ನು ಕರೆದು ಮಾತಾಡಬೇಕು. ಅಲ್ಲಿ ಹೋದ ಶಾಸಕರಿಗೆ ಅಗೌರವ ಮಾಡುವುದು ಸರಿಯಲ್ಲ. ಶಾಸಕರ ಕುಟುಂಬಕ್ಕೆ ಕನಿಷ್ಠ ನಾಲ್ಕು ಟಿಕೆಟ್ ನೀಡಬೇಕು. ಜನಪ್ರತಿನಿಧಿಗಳಿಗೆ ಗೌರವ ಕೊಡುವ ಕೆಲಸ ಆಗಬೇಕು’ ಎಂದು ಸೂಚಿಸಿದರು.
ನಂತರ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಶಾಸಕರು ಕೇಳುವುದರಲ್ಲಿ ಯಾವುದೇ ತಪ್ಪೇನು ಇಲ್ಲ. ನಾನೂ ಕ್ರಿಕೆಟ್ ಮಂಡಳಿಯಲ್ಲಿ ಸದಸ್ಯನಿದ್ದೇವೆ. ಕೆಎಸ್ಸಿಎ ಅಧ್ಯಕ್ಷರನ್ನು ಕರೆಸಿ ಮಾತನಾಡುತ್ತೇನೆ. ಸ್ಪೀಕರ್ ಆದೇಶ ಮತ್ತು ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ಶಾಸಕರಿಗೆ ಐಪಿಎಲ್ ಕ್ರಿಕೆಟ್ನ ಟಿಕೆಟ್ ಕೊಡಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.






