ಉಪಚುನಾವಣೆ | ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂಗೆ ಗೆಲುವು

ಅನ್ನಪೂರ್ಣ ತುಕಾರಾಂ
ಬೆಂಗಳೂರು : ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ.ಅನ್ನಪೂರ್ಣ ಅವರು ಬಿಜೆಪಿ ಅಭ್ಯರ್ಥಿಯ ವಿರುದ್ಧ 9,649 ಮತಗಳ ಅಂತರದಲ್ಲಿ ಭರ್ಜರಿ ಜಯಭೇರಿ ಭಾರಿಸಿದ್ದಾರೆ.
ಬಿಜೆಪಿ ಬಂಗಾರು ಹನುಮಂತು ಹೀನಾಯ ಸೋಲು ಕಂಡಿದ್ದು, ‘ಬಳ್ಳಾರಿ ಜಿಲ್ಲೆಯ ಪ್ರವೇಶ’ದ ಉಮೇದಿಯಲ್ಲಿದ್ದ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಕನಸು ಭಗ್ನಗೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಇ.ಅನ್ನಪೂರ್ಣ ಅವರು 93,616 ಮತಗಳನ್ನು ಗಳಿಸಿ ಜಯ ಸಾಧಿಸಿದ್ದರೆ, ಬಿಜೆಪಿಯ ಬಂಗಾರು ಹನುಮಂತು-83,967 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ.
ನೆರೆಯ ಆಂಧ್ರಪ್ರದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಬಳ್ಳಾರಿಯ ಸಂಡೂರು ಕ್ಷೇತ್ರ ಮೊದಲಿನಿಂದಲ್ಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಈ ಕ್ಷೇತ್ರದಿಂದ ಇ.ತುಕಾರಾಂ ಅವರು ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ತುಕಾರಾಂ ಲೋಕಸಭೆಗೆ ಸ್ಪರ್ಧಿಸಿ ಗೆಲವು ಸಾಧಿಸಿದರು. ಹೀಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಹೀಗಾಗಿ ಆ ತಮ್ಮ ಪತ್ನಿಯನ್ನು ಕಣ್ಣಕ್ಕಿಳಿಸುವ ಮೂಲಕ ಅವರು ಇದೀಗ ಗೆದ್ದು ಬೀಗಿದ್ದಾರೆ.
ನ.13ರಂದು ನಡೆದ ಸಂಡೂರು ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರೆ, ಪ್ರತಿಪಕ್ಷ ಬಿಜೆಪಿ ಸೋಲು ಕಂಡಿದೆ. ಆದರೆ, ಅಖಾಡದಲ್ಲಿದ್ದ ಏಳು ಅಭ್ಯರ್ಥಿಗಳ ಪೈಕಿ ಮೂವರು ಪಕ್ಷೇತರರು ಹಾಗೂ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಗಳಿಗಿಂತ ‘ನೋಟಾ’ 1,040 ಮತಗಳನ್ನು ಗಳಿಸುವ ಮೂಲಕ ಗಮನ ಸೆಳೆದಿದೆ.
ಈ ರೀತಿಯ ಸೋಲು ನಿರೀಕ್ಷಿಸಿರಲಿಲ್ಲ: ‘ಸಂಡೂರು ಉಪಚುನಾವಣೆಯ ಫಲಿತಾಂಶದ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಈ ರೀತಿಯಲ್ಲಿ ಸೋಲನ್ನು ನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ 9,649 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪಂಚಾಯಿತಿ ಮಟ್ಟದಲ್ಲಿ ಪ್ರಚಾರ ನಡೆಸಿ, 100 ಕೋಟಿ ರೂ.ಖರ್ಚು ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿದ್ದಾರೆ. ಆಡಳಿತದಲ್ಲಿ ಕಾಂಗ್ರೆಸ್ ಇರುವುದರಿಂದ ಸಹಜವಾಗಿ ಗೆಲುವು ಸಾಧಿಸಿದೆ’
-ಗಾಲಿ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದ ಶಾಸಕ
ಸೋಲಿಗೆ ನಾನೇ ಹೊಣೆ: ‘ಸಂಡೂರು ಕ್ಷೇತ್ರದಲ್ಲಿ ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದು, ಅವರು ಹಣ ಹಂಚಿದ ಪ್ರದೇಶದಲ್ಲಿ ನಮಗೆ ಹಿನ್ನಡೆ ಆಗಿದೆ. ಸೋಲಿನ ಹೊಣೆ ನಾನೇ ಹೊರುವೆ. ಚುನಾವಣೆಯಲ್ಲಿ ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು. ಇದು ಧರ್ಮ-ಅಧರ್ಮಗಳ ನಡುವಿನ ಚುನಾವಣೆ. ಈ ಸೋಲು ನಾನು ಸವಾಲಾಗಿ ಸ್ವೀಕರಿಸುವೆ. ಮುಂದಿನ ದಿನಗಳಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸುವೆ’
-ಬಂಗಾರು ಹನುಮಂತು, ಪರಾಜಿತ ಬಿಜೆಪಿ ಅಭ್ಯರ್ಥಿ







