ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ಮಾಜಿ ಸಚಿವರಾದ ಎಚ್.ವೈ.ಮೇಟಿ ಹಾಗೂ ಡಾ.ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಭಾರತೀಯ ಚುನಾವಣಾ ಆಯೋಗವು ಎ.9ರಂದು ಉಪಚುನಾವಣೆ ಘೋಷಣೆ ಮಾಡಿದೆ.
ರವಿವಾರ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಎಚ್.ವೈ.ಮೇಟಿ ಪ್ರತಿನಿಧಿಸುತ್ತಿದ್ದ ಬಾಗಲಕೋಟೆ ಹಾಗೂ ಡಾ.ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಎ.9ರಂದು ಮತದಾನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಎರಡು ಕ್ಷೇತ್ರಗಳಿಗೆ ಚುನಾವಣಾ ಅಧಿಸೂಚನೆಯು ಮಾ.16ರಂದು ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರಗಳ ಸಲ್ಲಿಕೆ ಆರಂಭವಾಗಲಿದೆ. ಮಾ.23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಮಾ.24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಾ.26ರವರೆಗೆ ಅಭ್ಯರ್ಥಿಗಳಿಗೆ ತಮ್ಮ ಉಮೇದುವಾರಿಕೆ ಹಿಂಪಡೆಯಲು ಅವಕಾಶವಿದೆ. ಎ.9ರಂದು ಮತದಾನ ನಡೆಯಲಿದ್ದು, ಮೇ 4ರಂದು ಮತಗಳ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ.
ಎಚ್.ವೈ.ಮೇಟಿ(79) 2023ರ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದರು. ಐದು ಬಾರಿ ಶಾಸಕರಾಗಿದ್ದ ಎಚ್.ವೈ.ಮೇಟಿ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪ್ರಸಕ್ತ ಸರಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
2025ರ ನ.4ರಂದು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಚ್.ವೈ.ಮೇಟಿ ಕೊನೆಯುಸಿರೆಳೆದಿದ್ದರು. ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಕ್ಷೇತ್ರಕ್ಕೆ ಮೇಟಿ ಅವರ ಕುಟುಂಬ ಸದಸ್ಯರನ್ನೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಜಿದ್ದಾಜಿದ್ದಿನ ಕಣವಾಗಿರುವ ದಾವಣಗೆರೆ ದಕ್ಷಿಣ: ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಮ್ಮ ತಂದೆಯಿಂದ ತೆರವಾಗಿರುವ ಸ್ಥಾನಕ್ಕೆ ತಮ್ಮ ಮಗ ಸಮರ್ಥ್ ಮಲ್ಲಿಕಾರ್ಜುನ್ ರನ್ನು ಕಣಕ್ಕಿಳಿಸಲು ರಣತಂತ್ರ ಹೆಣೆಯುತ್ತಿದ್ದಾರೆ.
ಶಾಮನೂರು ಶಿವಶಂಕರಪ್ಪ ಇದೇ ತಮ್ಮ ಕೊನೆಯ ಚುನಾವಣೆ, ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುವುದಾಗಿ ಭರವಸೆ ನೀಡಿದ್ದರು. ಆದುದರಿಂದ, ಈ ಬಾರಿ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ನಾಯಕರ ಮೇಲೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಒತ್ತಡ ಹೇರುತ್ತಿದ್ದಾರೆ.
ಝಮೀರ್-ಮಲ್ಲಿಕಾರ್ಜುನ್ ನಡುವೆ ವಾಕ್ಸಮರ
ದಾವಣಗೆರೆ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಆಗ್ರಹದ ಕುರಿತು ಮಾತನಾಡಿದ ಸಚಿವ ಝಮೀರ್ ಅಹ್ಮದ್ ಖಾನ್ ನಡೆಯನ್ನು ಟೀಕಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ಅವನ್ಯಾರು? ಎಂದು ಆಕ್ರೋಶ ಹೊರ ಹಾಕಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಝಮೀರ್ ಅಹ್ಮದ್, ನಾನು ಅಲ್ಪಸಂಖ್ಯಾತ ಸಮುದಾಯದ ನಾಯಕ. ಆದುದರಿಂದ, ಮುಖಂಡರು ನನ್ನ ಬಳಿ ಬಂದು ತಮ್ಮ ಬೇಡಿಕೆಯ ಬಗ್ಗೆ ಮಾತನಾಡಿದ್ದಾರೆ. ಅದನ್ನೆ ನಾನು ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೇನೆ. ಟಿಕೆಟ್ ನೀಡುವುದು ನನ್ನ ಕೈಯಲ್ಲಿ ಇಲ್ಲ. ಅದು ಹೈಕಮಾಂಡ್ ಕೆಲಸ. ನಾವು ನಮ್ಮ ಬೇಡಿಕೆಯನ್ನು ಹೇಳಬಾರದೆ? ಎಂದಿದ್ದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮತಗಳು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರದ್ದು ಇದೆ. ಶಾಮನೂರು ಶಿವಶಂಕರಪ್ಪ ಅವರ ಜೀವಿತಾವಧಿಯಲ್ಲಿ ನಾವು ಅವರನ್ನು ಬೆಂಬಲಿಸಿಕೊಂಡು ಬಂದಿದ್ದೇವೆ. ಇದೀಗ ಅವರಿಲ್ಲ, ಆದುದರಿಂದ, ನಾವು ನಮ್ಮ ಹಕ್ಕನ್ನು ಹೈಕಮಾಂಡ್ ಮುಂದೆ ಮಂಡಿಸುತ್ತಿದ್ದೇವೆ.
ಅಬ್ದುಲ್ ಜಬ್ಬಾರ್, ವಿಧಾನಪರಿಷತ್ ಸದಸ್ಯ
ಬಾಗಲಕೋಟೆ: ಪುರುಷ ಮತದಾರರು-1,26,761, ಮಹಿಳಾ ಮತದಾರರು-1,32,476, ತೃತೀಯ ಲಿಂಗಿಗಳು-23 ಸೇರಿದಂತೆ ಒಟ್ಟು 2,59,260 ಮತದಾರರು. ಒಟ್ಟು 187 ಸ್ಥಳಗಳಲ್ಲಿ 319 ಮತಗಟ್ಟೆಗಳು(ನಗರ ಪ್ರದೇಶ-143, ಗ್ರಾಮೀಣ-176) ಸ್ಥಾಪಿಸಲಾಗಿದೆ.
ದಾವಣಗೆರೆ ದಕ್ಷಿಣ: ಪುರುಷ ಮತದಾರರು-1,13,654, ಮಹಿಳಾ ಮತದಾರರು-1,17,986, ತೃತೀಯ ಲಿಂಗಿಗಳು-43 ಸೇರಿದಂತೆ ಒಟ್ಟು 2,31,683 ಮತದಾರರು. ಒಟ್ಟು 136 ಸ್ಥಳಗಳಲ್ಲಿ 284 ಮತಗಟ್ಟೆಗಳು(ನಗರ ಪ್ರದೇಶ-143, ಗ್ರಾಮೀಣ-176) ಸ್ಥಾಪಿಸಲಾಗಿದೆ.
ಇವಿಎಂ-ವಿವಿಪ್ಯಾಟ್ ಬಳಕೆ: ಎಲ್ಲ ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಮತ್ತು ವಿವಿಪ್ಯಾಟ್ (ವಿವಿಪ್ಯಾಟ್) ಬಳಸಲಾಗುವುದು.
ಪ್ರಮುಖ ಸೂಚನೆಗಳು: ಮತದಾನಕ್ಕೆ ಭಾವಚಿತ್ರ ಸಹಿತ ಮತದಾರರ ಗುರುತಿನ ಚೀಟಿ (ಎಪಿಕ್) ಮುಖ್ಯ ದಾಖಲೆಯಾಗಿದೆ. ಇದರ ಜೊತೆಗೆ ಆಧಾರ್ ಕಾರ್ಡ್, ನರೇಗಾ ಉದ್ಯೋಗ ಕಾರ್ಡ್, ಬ್ಯಾಂಕ್ ಪಾಸ್ಬುಕ್, ವಾಹನ ಪರವಾನಿಗೆ ಸೇರಿದಂತೆ ಆಯೋಗವು ಸೂಚಿಸಿರುವ 12 ಪರ್ಯಾಯ ದಾಖಲೆಗಳನ್ನು ಬಳಸಬಹುದು.
ಮಾದರಿ ನೀತಿ ಸಂಹಿತೆ: ಚುನಾವಣೆ ಘೋಷಣೆಯಾದ ದಿನಾಂಕದಿಂದಲೇ ಅಂದರೆ ಮಾ.15 ರಿಂದ ಸಂಬಂಧಪಟ್ಟ ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆಯು ಜಾರಿಗೆ ಬಂದಿದೆ.
ಹೆಚ್ಚಿನ ಮಾಹಿತಿಗಾಗಿ ಮತದಾರರು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಅಥವಾ 'Voter Helpline App' ಅನ್ನು ಬಳಸಬಹುದು ಎಂದು ಭಾರತ ಚುನಾವಣಾ ಆಯೋಗದ ಕಾರ್ಯದರ್ಶಿ ಸಂಜೀವ್ ಕುಮಾರ್ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋವಾ, ಕರ್ನಾಟಕ ಸಹಿತ 6 ರಾಜ್ಯಗಳ 8 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಿಸಿದ ಸಿಇಸಿ
ಗೋವಾ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ನಾಗಾಲ್ಯಾಂಡ್ ಮತ್ತು ತ್ರಿಪುರದ 8 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕವನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಘೋಷಿಸಿದ್ದಾರೆ.
ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎಪ್ರಿಲ್ 9ರಂದು ಮತದಾನ ನಡೆಯಲಿದೆ. ಇದೇ ರೀತಿ ಗೋವಾದ ಪೋಂಡಾ ಕ್ಷೇತ್ರದಲ್ಲಿ ನಾಗಾಲ್ಯಾಂಡ್ ನ ಕೋರಿಡಾಂಗ್, ತ್ರಿಪುರಾದ ಧರ್ಮನಗರ ಕ್ಷೇತ್ರದಲ್ಲಿ ಎಪ್ರಿಲ್ 9ರಂದು ಮತದಾನ ನಡೆಯಲಿದೆ
ಗುಜರಾತ್ ನ ಉಮ್ರೆತ್ ಮತ್ತು ಮಹಾರಾಷ್ಟ್ರದ ರಾಹುರಿ ಮತ್ತು ಬಾರಾಮತಿ ಕ್ಷೇತ್ರದಲ್ಲಿ ಎಪ್ರಿಲ್ 23ರಂದು ಮತದಾನ ನಡೆಯಲಿದೆ.






