ಹೇಮಾವತಿ ನದಿ ನೀರಿನ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಬಿ.ವೈ.ವಿಜಯೇಂದ್ರ

ವಿಜಯೇಂದ್ರ
ಬೆಂಗಳೂರು : ರಾಜ್ಯ ಸರಕಾರವು ಹೇಮಾವತಿ ನದಿ ನೀರಿನ ವಿಚಾರದಲ್ಲಿ ರೈತರ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ. ಪೊಲೀಸರ ಮೂಲಕ ಗೂಂಡಾಗಿರಿ ಮಾಡಿ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರೋ ಇಬ್ಬರೋ ಕಲ್ಲು ಹೊಡೆದಿರಬಹುದು, ಅದು ಸರಿ ಎನ್ನುವುದಿಲ್ಲ. ಪೊಲೀಸರು ನಮ್ಮ ರಾಜ್ಯದ ಆಸ್ತಿ. ಆದರೆ, ಯಾರೋ ಕಲ್ಲು ಹೊಡೆದರೆಂದು ನಮ್ಮ ಕಾರ್ಯಕರ್ತರನ್ನು ಹಾಗೂ ರೈತ ಮುಖಂಡರನ್ನು ಗುರಿ ಮಾಡಿ, ಅವರನ್ನು ಒಳಗೆ ಹಾಕುವ ಕುತಂತ್ರ ನಡೆಯುತ್ತಿದೆ ಎಂದು ಹೇಳಿದರು.
ಈ ನಾಲಾಯಕ್ ಕಾಂಗ್ರೆಸ್ ಸರಕಾರವು, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಅಭಿವೃದ್ಧಿಗೆ ಹಣ ಕೊಡುವುದಕ್ಕೆ ಸಾಧ್ಯ ಆಗುತ್ತಿಲ್ಲ. ಕಾನೂನು-ಸುವ್ಯವಸ್ಥೆ ಹಾಳಾಗಲು ರಾಜ್ಯ ಸರಕಾರದ ಷಡ್ಯಂತ್ರವೇ ಕಾರಣ. ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕುವ ಸಲುವಾಗಿ ಸರಕಾರ ಹೀಗೆ ಮಾಡುತ್ತಿದೆ. ಇವರ ಗೂಂಡಾ ವರ್ತನೆ, ಸೊಕ್ಕನ್ನು ಮುರಿಯುವ ಶಕ್ತಿ ಬಿಜೆಪಿಗೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇವೆ ಎಂದು ಹೇಳಿದರು.
ಸರಕಾರದ ನಡವಳಿಕೆಯಿಂದ ದಕ್ಷಿಣ ಕನ್ನಡ-ಕರಾವಳಿ ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಾಳಾಗುತ್ತಿದೆ. ಇದನ್ನು ತಿದ್ದಿಕೊಳ್ಳದೆ ಪೊಲೀಸ್ ಮೂಲಕ ಗೂಂಡಾಗಿರಿ ಮಾಡಿದ್ದೇ ಆದರೆ, ಬಿಜೆಪಿ ಕೈಕಟ್ಟಿಕೊಂಡು ಕೂರುವುದಿಲ್ಲ. ಈ ವಿಷಯವಾಗಿ ನಿನ್ನೆ ರಾತ್ರಿ ರಾಷ್ಟ್ರೀಯ ಮುಖಂಡರ ಜೊತೆ ಚರ್ಚೆ ಮಾಡಿದ್ದೇನೆ. ಇವತ್ತು ನಮ್ಮ ಸಂಸದರು, ಶಾಸಕರು ಪೊಲೀಸ್ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ಹೇಳಿದರು.
ನಮ್ಮ ರಾಜ್ಯದಲ್ಲಿ ಚುನಾಯಿತ ಸರಕಾರ ಇದೆ, ಪೊಲೀಸರು ಕಾನೂನು-ಸುವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂಬ ನಂಬಿಕೆ ಬರುತ್ತಿಲ್ಲ. ಇದರ ನಡುವೆ ಸಂಘ ಪರಿವಾರದ ಹಿರಿಯರು, ಹಿಂದೂ ಮುಖಂಡರ ಮೇಲೆ ಎಫ್ಐಆರ್ ದಾಖಲಿಸಿ, ನಮ್ಮ ಕಾರ್ಯಕರ್ತರನ್ನು ಬೆದರಿಸುವ ಕುತಂತ್ರ ಮಾಡುತ್ತಿದ್ದಾರೆ. ಮಧ್ಯರಾತ್ರಿ ಕಾರ್ಯಕರ್ತರ ಮನೆಯ ಬಾಗಿಲು ತಟ್ಟಿ, ಅವರನ್ನು ವಿಚಾರಿಸುತ್ತಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.







