‘ರಾಮನಗರ ಬಳಿ 18,133 ಕೋಟಿ ರೂ.ಮೊತ್ತದಲ್ಲಿ ಸಮಗ್ರ ಉಪನಗರ ಯೋಜನೆ ಅನುಷ್ಠಾನ’: ಸಚಿವ ಸಂಪುಟ ಸಭೆ ತೀರ್ಮಾನ

File Photo: X/@HKPatilINC
ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ 9 ಗ್ರಾಮಗಳ ಸುಮಾರು 7,481 ಎಕರೆ 21.08 ಗುಂಟೆ ಪ್ರದೇಶದಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು 18,133 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಗೆ 7500 ಕೋಟಿ ರೂ.ಬ್ಯಾಂಕ್ ಖಾತ್ರಿಯನ್ನು ಸರಕಾರ ನೀಡಲಿದೆ. ಭೂ ಮಾಲಕರಿಗೆ ಪ್ರತಿ ಎಕರೆಗೆ 9,693 ಚ.ಅಡಿ ಅಭಿವೃದ್ಧಿಪಡಿಸಿದ ವಸತಿ ನಿವೇಶನವನ್ನು ಪರಿಹಾರವಾಗಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಈ ಯೋಜನೆಯು ರಾಮನಗರ ತಾಲೂಕು, ಬಿಡದಿ ಹೋಬಳಿ, ಬೈರಮಂಗಲ, ಬನ್ನಿಗಿರಿ, ಹೊಸೂರು, ಕೆ.ಜಿ ಗೊಲ್ಲರಪಾಳ್ಯ, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ತಾಲೂಕು, ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಭಾಗಶಃ ಒಟ್ಟು 9 ಗ್ರಾಮಗಳ ಸುಮಾರು 7481 ಎಕರೆ 21.08 ಗುಂಟೆ ಪ್ರದೇಶವನ್ನು ಒಳಗೊಳ್ಳಲಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ಪ್ರಾಯೋಜಿತ ಹೈದರಾಬಾದ್-ಬೆಂಗಳೂರು ನಡುವಿನ 607 ಕಿ.ಮೀ. ಹೈ ಸ್ಪೀಡ್ ರೈಲು ಕಾರಿಡಾರ್ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಹಾಗೂ ಶಾಸನಬದ್ಧ ಬೆಂಬಲ ನೀಡಲು ಅನುಮೋದನೆ ನೀಡಲಾಗಿದೆ. ಈ ಯೋಜನೆಯಡಿ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ 101.3 ಕಿ.ಮೀ ಮಾರ್ಗ, 15 ರೈಲ್ವೆ ನಿಲ್ದಾಣಗಳು ಒಳಪಡುತ್ತವೆ ಎಂದು ಅವರು ಮಾಹಿತಿ ನೀಡಿದರು.
ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗೆ 600 ಕೋಟಿ ರೂ.: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ಕಾಲನಿಗಳ ಅಭಿವೃದ್ಧಿಗೆ 2026-27 ಮತ್ತು 2027-28ನೆ ಸಾಲಿಗೆ 600 ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ರೂಪಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ರಾಷ್ಟ್ರೀಯ ಉಚಿತ ಆರೋಗ್ಯ ಪತ್ತೆ ಕಾರ್ಯಕ್ರಮದಡಿಯಲ್ಲಿ 6 ಎಂ.ಆರ್.ಐ ಯಂತ್ರಗಳನ್ನು ಒಟ್ಟು 81 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಿ ಆರು ಜಿಲ್ಲಾ ಆಸ್ಪತ್ರೆಗಳಿಗೆ ಪೂರೈಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬೆಂಗಳೂರು-ಬೀದರ್-ಬೆಂಗಳೂರು ಹಾಗೂ ಬೆಂಗಳೂರು-ಕಲಬುರಗಿ-ಬೆಂಗಳೂರು ಮಾರ್ಗಗಳಲ್ಲಿ ವಿಮಾನ ಸೇವೆಗಳ ನಿರ್ವಹಣೆಗೆ ಒಂದು ವರ್ಷಕ್ಕೆ 28.47 ಕೋಟಿ ರೂ.ಗಳಂತೆ ಹಣಕಾಸು ಪ್ರೋತ್ಸಾಹ ಧನವನ್ನು ವಿಜಿಎಫ್ ರೂಪದಲ್ಲಿ ಒದಗಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಕಲಬುರಗಿ ಜಿಲ್ಲೆಯ ಅಫ್ಝಲ್ಪುರದಿಂದ ಕರಜಗಿವರೆಗೆ ರಾಜ್ಯ ಹೆದ್ದಾರಿ-22 ಸರಪಳಿ 54.50 ರಿಂದ 76.54 ಕಿ.ಮೀ ಮತ್ತು ಚೌಡಾಪುರದಿಂದ ಚಿನಮಳ್ಳಿ ರಾಜ್ಯ ಹೆದ್ದಾರಿ-171 ಸರಪಳಿ 146.88 ರಿಂದ 170.28 ಕಿ.ಮೀ(ಆಯ್ದ ಭಾಗಗಳಲ್ಲಿ) ರಸ್ತೆ ಮರು ಡಾಂಬರೀಕರಣ ಕಾಮಗಾರಿಗಳನ್ನು 28.97 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ನೂತನ ಕಟ್ಟಡ ನಿರ್ಮಾಣದ ಹೆಚ್ಚುವರಿ ಕಾಮಗಾರಿಗಳನ್ನು 20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಹೊಸ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟು 73.75 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಭಾರತ ಸರಕಾರದ ಅರ್ಬನ್ ಚಾಲೆಂಜ್ ಫಂಡ್ ನಲ್ಲಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯ ಉನ್ನತ ಅಧಿಕಾರ ಚಾಲನಾ ಸಮಿತಿ(ಎಸ್ಎಚ್ಪಿಎಸ್ಸಿ) ಮತ್ತು ರಾಜ್ಯ ಮಟ್ಟದ ತಾಂತ್ರಿಕ ಸಮಿತಿ(ಎಸ್ಎಲ್ಟಿಸಿ)ಗಳನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 1 ರಿಂದ 12ನೆ ತರಗತಿಯಲ್ಲಿರುವ ಶಾಲಾ ಮಕ್ಕಳಿಗೆ ವಿವಿಧ ಲೇಖನ ಸಾಮಾಗ್ರಿಗಳು ಹಾಗೂ ಪುಸ್ತಕಗಳನ್ನು ಒಳಗೊಂಡ ಶಾಲಾ ಕಿಟ್ಗಳನ್ನು 115.84 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ವಿತರಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಇತರ ನಿರ್ಣಯಗಳು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗುರುವಾಯನಕೆರೆ-ಉಪ್ಪಿನಂಗಡಿ ಪುತ್ತೂರು ರಾ.ಹೆ.118ರ ಕಿ.ಮೀ. 20.43 ರಿಂದ 21.80ರವರೆಗೆ ಮತ್ತು 24.45 ರಿಂದ 26ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 13 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
2025-26ನೆ ಸಾಲಿನ ಮುಂಗಾರು ಹಾಗೂ ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಬಿಳಿಜೋಳ ಖರೀದಿಸಲು ಅವಶ್ಯವಿರುವ ಹೆಚ್ಚುವರಿ ಗೋಣಿ ಚೀಲಗಳನ್ನು 21.35 ಕೋಟಿ ರೂ.ಗಳ ಮೊತ್ತದಲ್ಲಿ ಖರೀದಿಸಲು ಎ.24ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆಡಳಿತ ವೈದ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ವಿರುದ್ಧ ಲೋಕಾಯುಕ್ತ ಮಾಡಿರುವ ಶಿಫಾರಸ್ಸನ್ನು ತಿರಸ್ಕರಿಸಿ, ಆಡಳಿತ ಇಲಾಖೆಯಿಂದಲೆ ಇಲಾಖಾ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.
ಕ್ಯಾಲಿಫೋರ್ನಿಯದ ಮೆ.ಅಪ್ಲೈಡ್ ಮೆಟೀರಿಯಲ್ಸ್ ಇಂಕಾರ್ಪೋರೇಷನ್ ರವರಿಗೆ ಅತ್ಯಾಧುನಿಕ ತಂತ್ರಜ್ಞಾನದ ಸೆಮಿಕಂಡಕ್ಟರ್ ಮತ್ತು ಆರ್ ಅಂಡ್ ಡಿ ಹಾಗೂ ಇನ್ನೋವೇಷನ್ ಇಕೋಸಿಸ್ಟಮ್ ಅನ್ನು ಸ್ಥಾಪಿಸಲು ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್ ನಲ್ಲಿ 140 ಎಕರೆ ಜಮೀನನ್ನು ಗುತ್ತಿಗೆ ಹಾಗೂ ಮಾರಾಟ ಆಧಾರದ ಮೇಲೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಅವಶ್ಯವಿರುವ 80 ನಗರ ಸಾರಿಗೆ ಬಸ್ಸುಗಳನ್ನು 32 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆಂಧ್ರಪ್ರದೇಶದ ತಿರುಮಲದಲ್ಲಿರುವ ಕರ್ನಾಟಕ ರಾಜ್ಯ ಛತ್ರದಲ್ಲಿನ ಕೊಠಡಿಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ವಹಿಸಲು ನಿರ್ಧರಿಸಲಾಗಿದೆ.
ಕೆ.ಎಸ್.ಡಿ.ಎಲ್ ಸಂಸ್ಥೆಯು ವಿಜಯಪುರದ ಇಟ್ಟಂಗಿಹಾಳ ಕೈಗಾರಿಕಾ ಪ್ರದೇಶದಲ್ಲಿ 50 ಎಕರೆ ಜಮೀನನ್ನು ಖರೀದಿಸಲು ಹಾಗೂ ಯಂತ್ರೋಪಕರಣಗಳು, ಸಿವಿಲ್ ಕಾಮಗಾರಿಗಳು ಮತ್ತು ಅಗತ್ಯ ಮೂಲಸೌಕರ್ಯಗಳೊಂದಿಗೆ ಸೋಪು ಮತ್ತು ಮಾರ್ಜಕ ಉತ್ಪಾದನಾ ಘಟಕವನ್ನು ಒಟ್ಟು 227.91 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ನವಜಾತ ಶಿಶುಗಳಲ್ಲಿ ಅಪರೂಪದ ಜನ್ಮಜಾತ ಮತ್ತು ಚಯಾಪಚಯ ಅಸ್ವಸ್ಥತೆಗಳಿಗಾಗಿ ಸಾರ್ವಜನಿಕ ನವಜಾತ ಶಿಶು ತಪಾಸಣೆ ಯೋಜನೆಯನ್ನು 5.58 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಕೇಂದ್ರ ಸರಕಾರ ಪ್ರಾಯೋಜಿತ ಚೆನ್ನೈ-ಬೆಂಗಳೂರು ನಡುವಿನ ಹೈ ಸ್ಪೀಡ್ ರೈಲು ಕಾರಿಡಾರ್ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.






