ಉಳ್ಳಾಲದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗಾಗಿ ವಸತಿ ಸಹಿತ ಕಾಲೇಜು ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ

File Photo
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗಾಗಿ ವಸತಿ ಸಹಿತ ಪಿಯು ಕಾಲೇಜು ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸಚಿವ ಸಂಪುಟ ಸಭೆಯ ನಿರ್ಣಯಗಳನ್ನು ತಿಳಿಸಿದರು.
ಪ್ರಸ್ತುತ ವಾರ್ಷಿಕ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗಾಗಿ ವಸತಿ ಸಹಿತ ಪಿಯು ಕಾಲೇಜು 15 ಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಹಾಗೂ ಆವರ್ತಕ ಹಾಗೂ ಅನಾವರ್ತಕ ವೆಚ್ಚ ರೂ. 2.09 ಕೋಟಿಗಳ ವೆಚ್ಚ ಸೇರಿ ಒಟ್ಟು ರೂ. 17.9 ಕೋಟಿಗಳ ವೆಚ್ಚವನ್ನು ಭರಿಸಲಾಗುವುದು ಎಂದರು.
ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗಾಗಿ ವಸತಿ ಸಹಿತ ಪಿಯು ಕಾಲೇಜು ಅನ್ನು ಪಿಸಿಎಂಬಿ, ಪಿಸಿಎಂಸಿ, ಸಿಇಬಿಎ ಮತ್ತು ಎಚ್ಇಪಿಎಸ್ ವಿಭಾಗಗಳಲ್ಲಿ ಒಟ್ಟು 400 ಸಂಖ್ಯಾಬಲದೊಂದಿಗೆ ಪ್ರಸಕ್ತ ಸಾಲಿನಿಂದ ಮಂಜೂರು ಮಾಡಿ ವಿವಿಧ ವೃಂದದ ಹುದ್ದೆಗಳನ್ನು ಸೃಜಿಸಿ ಪ್ರಾರಂಭಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದೂ ಅವರು ಉಲ್ಲೇಖಿಸಿದರು.





