ಕೇಂದ್ರೀಯ ಭಂಡಾರದಿಂದ ಸಮವಸ್ತ್ರಕ್ಕಾಗಿ ಕಳಪೆ ಗುಣಮಟ್ಟದ ಬಟ್ಟೆ ಪೂರೈಕೆ ಕುರಿತು ತನಿಖೆಗೆ ಸಂಪುಟ ನಿರ್ಧಾರ: ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಸೆ. 7: ವಿದ್ಯಾ ವಿಕಾಸ ಯೋಜನೆಯಡಿ 2021-22, 2022-23ರಲ್ಲಿ ಸಮವಸ್ತ್ರ ತಯಾರಿಸಲು ಕೇಂದ್ರೀಯ ಭಂಡಾರದಿಂದ ಕಳಪೆ ಗುಣಮಟ್ಟದ ಬಟ್ಟೆ ಸರಬರಾಜು ಆಗಿದ್ದರೂ ಅವರಿಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆಯಾಗಿರುವ ಕುರಿತು ಇಲಾಖಾ ತನಿಖೆ ನಡೆಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರೀಯ ಭಂಡಾರದಿಂದ ಸರಬರಾಜು ಆಗಿರುವ 134.05 ಲಕ್ಷ ಮೀಟರ್ ಬಟ್ಟೆ ಕಳಪೆ ಗುಣಮಟ್ಟದ್ದಾಗಿತ್ತು. ಆದರೂ, ಸರಬರಾಜು ಮಾಡಿದವರಿಗೆ 96.92 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದರು.
ಆದರೆ, ಉತ್ತಮ ಗುಣಮಟ್ಟದ ಬಟ್ಟೆ ನೇಯ್ದು ಕೊಟ್ಟ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ಹಣ ಪಾವತಿಯಾಗಿರಲಿಲ್ಲ. ಆದುದರಿಂದ, ನೇಕಾರರಿಗೆ ಹಣ ಪಾವತಿಸಲು ರಾಜ್ಯ ಕೈ ಮಗ್ಗ ಅಭಿವೃದ್ಧಿ ನಿಗಮಕ್ಕೆ ಸಮವಸ್ತ್ರದ ಬಾಕಿ ಹಣ 14.48 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ರಾಜ್ಯ ಉಗ್ರಾಣ ನಿಗಮವು ವಿವಿಧ ಯೋಜನೆಗಳಿಗೆ ನಬಾರ್ಡ್ ಸಂಸ್ಥೆಯಿಂದ ಪಡೆದಿದ್ದ 13 ಕೋಟಿ ರೂ. ಸಾಲವನ್ನು 2022-23ನೆ ಸಾಲಿನಲ್ಲಿ ಮರುಪಾವತಿ ಮಾಡಿದ್ದು. ಅದಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ)ದಲ್ಲಿ ಖಾಲಿಯಿರುವ ಇಬ್ಬರು ಸದಸ್ಯರ ಹುದ್ದೆಗಳ ಭರ್ತಿ, ಐದನೆ ರಾಜ್ಯ ಹಣಕಾಸು ಆಯೋಗ ರಚನೆ ಮತ್ತು ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ಮೇಲ್ದರ್ಜೆಗೇರಿಸಲು ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 17 ಕೋಟಿ ರೂ.ಗಳ ಪರಿಷ್ಕøತ ಅಂದಾಜು, ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟದ ಕಾಮಗಾರಿ ಕೈಗೊಳ್ಳಲು 162.80 ಕೋಟಿ ರೂ.ಗಳ ಪರಿಷ್ಕøತ ಅಂದಾಜು ಹಾಗೂ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಹಾಸ್ಟೆಲ್ ಕಟ್ಟಡ ಕಾಮಗಾರಿಯ 29.76 ಕೋಟಿ ರೂ.ಗಳ ಪರಿಷ್ಕøತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಸೊರಬ ತಾಲೂಕಿನಲ್ಲಿ 18-25 ಸಾವಿರ ಜನಸಂಖ್ಯೆಗೆ ಒಬ್ಬ ಜಿಲ್ಲಾ ಪಂಚಾಯಿತಿ ಸದಸ್ಯ ಇರುವಂತೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲು ಅವಕಾಶ ಕಲ್ಪಿಸಲು ರಾಜ್ಯ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2023ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಶಕ್ತಿ ಯೋಜನೆಯಡಿ ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸಲು ಈ ಹಿಂದೆ ಕೈಗೊಂಡಿದ್ದ ನಿರ್ಣಯಕ್ಕೆ ಘಟೋನೋತ್ತರ ಅನುಮೋದನೆ ನೀಡುವುದರ ಜೊತೆಗೆ, ಈ ಅವಧಿಯನ್ನು ಇನ್ನೂ ಆರು ತಿಂಗಳು ವಿಸ್ತರಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಸ್ಮಾರ್ಟ್‍ಕಾರ್ಡ್‍ಗಾಗಿ ಫಲಾನುಭವಿಗಳಿಗೆ ಒದಗಿಸಲಾಗುತ್ತಿರುವ ಪ್ರತಿ ಕಾರ್ಡ್‍ಗೆ 14.16 ರೂ.ಸೇವಾ ಶುಲ್ಕವನ್ನು ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೆಎಸ್ಸಾರ್ಟಿಸಿಯಿಂದ 100 ಕೋಟಿ ರೂ.ವೆಚ್ಚದಲ್ಲಿ 250 ಹೊಸ ಬಸ್ಸುಗಳು, ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮವು 150 ಕೋಟಿ ರೂ.ವೆಚ್ಚದಲ್ಲಿ 375 ಹೊಸ ಬಸ್ಸುಗಳು, ಕೆಕೆಆರ್‍ಟಿಸಿಯಲ್ಲಿ 300 ಕೋಟಿ ರೂ.ವೆಚ್ಚದಲ್ಲಿ 250 ಬಸ್ಸುಗಳು ಹಾಗೂ ಬಿಎಂಟಿಸಿಯಲ್ಲಿ 320 ಎಸಿ ಎಲೆಕ್ಟ್ರಿಕ್ ಬಸ್ಸುಗಳನ್ನು 150 ಕೋಟಿ ರೂ.ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಸಹಕಾರ ಸಂಘದಲ್ಲಿನ ಲೆಕ್ಕಪರಿಶೋಧನಾ ಇಲಾಖೆಯನ್ನು ರಾಜ್ಯ ಲೆಕ್ಕಪತ್ರ ಇಲಾಖೆಯೊಂದಿಗೆ ವಿಲೀನಗೊಳಿಸಲು ಆರನೆ ವೇತನ ಆಯೋಗ ಮಾಡಿದ್ದ ಶಿಫಾರಸ್ಸನ್ನು ಕೈ ಬಿಡಲಾಗಿದೆ. ಕೋರಮಂಗಲ ಹೊರವರ್ತುಲ ರಸ್ತೆಯಲ್ಲಿ ನಿರ್ಮಿಸುತ್ತಿರುವ ಎಲಿವೇಟೆಡ್ ಕಾರಿಡಾರ್‍ನ 307.96 ಕೋಟಿ ರೂ.ಪರಿಷ್ಕøತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮುಂದಿನ ಸಭೆಯಲ್ಲಿ ಚರ್ಚೆ: ಹಿಂದುಳಿದ ವರ್ಗಗಳಿಗೆ ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಸಲುವಾಗಿ ನ್ಯಾ.ಭಕ್ತವತ್ಸಲ ಸಮಿತಿ ಸಲ್ಲಿಸಿರುವ ದ್ವೀತಿಯ ಪೂರಕ ವರದಿ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಚ್.ಕೆ.ಪಾಟೀಲ್ ಹೇಳಿದರು.
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಬರಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿ ಬರಬೇಕಿದೆ. ಬೆಳೆ ಸಮೀಕ್ಷೆ ಮಾಡಲಾಗುತ್ತಿದೆ. ವರದಿ ಬಂದ ಬಳಿಕ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಬರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಕೇಂದ್ರ ಸರಕಾರ ಬರ ಘೋಷಣೆ ಸಂಬಂಧ ನಿಗದಿಪಡಿಸಿರುವ ಮಾನದಂಡಗಳನ್ನು ತಿದ್ದುಪಡಿ ಮಾಡುವಂತೆ ಈಗಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಎಚ್.ಕೆ.ಪಾಟೀಲ್, ಕಾನೂನು ಸಚಿವ
---------------------------------------------------
ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ನಡೆದಿರುವ ಬೆಳವಣಿಗೆಗಳ ಬಗ್ಗೆ ಜಲಸಂಪನ್ಮೂಲ ಸಚಿವರು ಸಚಿವ ಸಂಪುಟ ಸಭೆಯಲ್ಲಿ ವಿವರಣೆ ನೀಡಿದ್ದಾರೆ. ಕಾನೂನು ತೊಡಕು, ರೈತರ ಹಿತ ಕಾಪಾಡಲು ಸರಕಾರ ಇಡಬೇಕಿರುವ ಹೆಜ್ಜೆಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕಾವೇರಿ ಕಣಿವೆಯಲ್ಲಿ ಮಳೆಯಾಗಬಹುದು ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ಯಾವುದೆ ಸರಕಾರ ಇದ್ದರೂ ರೈತರ ಹಿತ ಕಾಪಾಡುವುದನ್ನು ಯಾರು ಕೈ ಬಿಟ್ಟಿಲ್ಲ. ಸರ್ವಪಕ್ಷಗಳ ಸಭೆಯಲ್ಲೂ ಈ ಬಗ್ಗೆ ಎಲ್ಲರಿಗೂ ಸಂಪೂರ್ಣ ಮನವರಿಕೆ ಮಾಡಿದ್ದೇವೆ. ರೈತರ ಹಿತವನ್ನು ಕಾಪಾಡುವಲ್ಲಿ ಒಂದು ಹೆಜ್ಜೆಯೂ ನಾವು ಕಡಿಮೆ ಮಾಡಿಲ್ಲ ಎಂದು ಎಚ್.ಕೆ.ಪಾಟೀಲ್ ಹೇಳಿದರು.







