‘ಎಸ್ಐಆರ್’ ಪ್ರಕ್ರಿಯೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ | ಮೂರ್ನಾಲ್ಕು ದಿನಗಳಲ್ಲಿ ಅಂತಿಮ ನಿರ್ಣಯ: ಕಾನೂನು ಸಚಿವ ಎಚ್.ಕೆ.ಪಾಟೀಲ್

ಸಚಿವ ಎಚ್.ಕೆ.ಪಾಟೀಲ್ (File Photo)
ಬೆಂಗಳೂರು: ರಾಜ್ಯದಲ್ಲಿ ಪ್ರಾರಂಭವಾಗಲಿರುವ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ, ಗಂಭೀರವಾಗಿ ಚರ್ಚಿಸಲಾಗಿದೆ. ಈ ಸಂಬಂಧ ಮೂರ್ನಾಲ್ಕು ದಿನಗಳಲ್ಲಿ ನಮ್ಮ ಸರಕಾರ ಅಂತಿಮ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಈ ಎಸ್ಐಆರ್ ನಿಂದಾಗಿ ಸುಮಾರು 27 ಲಕ್ಷ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡರು. ಅದೇ ರೀತಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಕುರಿತು ಗಂಭೀರ ಆಕ್ಷೇಪಣೆಗಳು ಬಂದಿವೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೆ ಪ್ರಜೆಯ ಮತದಾನದ ಹಕ್ಕನ್ನು ಅನಾವಶ್ಯಕವಾಗಿ, ಉದ್ದೇಶಪೂರ್ವಕವಾಗಿ ಕಸಿದುಕೊಳ್ಳುವಂತಾಗಬಾರದು. ಒಂದು ವೇಳೆ ಅಂತಹ ಯಾವುದೆ ಪ್ರಕ್ರಿಯೆ ನಡೆದರೆ, ಅವುಗಳಿಂದ ನಾಗರಿಕರ ಮತದಾನದ ಹಕ್ಕು ಉಳಿಸಲು ಸರ್ವಪ್ರಯತ್ನ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಚುನಾವನಾ ಆಯೋಗಕ್ಕೆ ಕಾನೂನಿನ ಬಲದಿಂದ ಶಕ್ತಿ ಬಂದಿದೆ. ಆ ಕಾರಣಕ್ಕೆ ನಾವು ಈ ವಿಷಯವನ್ನು ಸುಪ್ರೀಂಕೋರ್ಟ್ಗೆ ತೆಗೆದುಕೊಂಡು ಹೋಗಬೇಕೆ ಎಂಬುದರ ಕುರಿತು ಚರ್ಚೆ ಮಾಡಿದ್ದೇವೆ. ಮತದಾರರ ಅಂತಿಮ ಪಟ್ಟಿ ಯಾವಾಗ ಪ್ರಕಟ ಆಗಬೇಕು. ಆ ಪಟ್ಟಿಯನ್ನು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಕೆ ಮಾಡಬೇಕು ಎಂಬುದರ ಕುರಿತು ಚರ್ಚೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಇದಲ್ಲದೆ, 10-12 ಅಂಶಗಳ ಮೇಲೆ ವಿವರವಾಗಿ ಚರ್ಚೆ ಮಾಡಿದ್ದೇವೆ. ಇಂದಿನ ಚರ್ಚೆ ಅಪೂರ್ಣವಾಗಿದ್ದು, ಇನ್ನೂ ಹೆಚ್ಚಿನ ಚರ್ಚೆ ಮಾಡಬೇಕಾದ ಅವಶ್ಯಕತೆ ಇದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರ ಜೊತೆಯೂ ಚರ್ಚೆ ಮಾಡುತ್ತೇವೆ. ಮೂರ್ನಾಲ್ಕು ದಿನಗಳಲ್ಲಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ. ಈ ವಿಚಾರದಲ್ಲಿ ಗಂಭೀರವಾದ ಹೆಜ್ಜೆ ಇಡಲು ಚರ್ಚೆ ನಡೆಯುತ್ತಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾವುದೆ ಪಾರದರ್ಶಕತೆ ಇಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಅನೇಕ ಅವಗಢಗಳು ಜರುಗಿವೆ. ಬಿಹಾರದಲ್ಲಿ ನ್ಯಾಯಾಧೀಕರಣ ರಚನೆ ಮಾಡಿದರು. ಅದಕ್ಕೆ ನೇಮಕ ಮಾಡಿದ್ದ ನ್ಯಾಯಾಧೀಶರು ರಾಜೀನಾಮೆ ನೀಡಿದರು. ಈ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಮಾಡುವಂತಹದ್ದು ಅಲ್ಲ, ಸಾಕಷ್ಟು ಸಮಯ ಬೇಕಾಗುತ್ತದೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಚರ್ಚೆ ಮುಂದುವರೆಸುತ್ತೇವೆ ಎಂದು ಅವರು ತಿಳಿಸಿದರು.






